ಕೃಷಿ ಪಂಪ್‌ಸೆಟ್ ಸಮಸ್ಯೆಗೆ ನಾಂದಿ ಹಾಡಿ; ಶೀಘ್ರ ಸಂಪರ್ಕ ಯೋಜನೆ ಪುನಾರಂಭಿಸಿ; ಇಂಧನ ಸಚಿವರಿಗೆ ರೈತ ಸಂಘ ಆಗ್ರಹ

17 HVR 3
Published on

ಹಾವೇರಿ: ಕೃಷಿ ಪಂಪ್‌ಸೆಟ್‌ಗಳಿಗೆ ಶೀಘ್ರ ಸಂಪರ್ಕ ಯೋಜನೆಯನ್ನು ಮತ್ತೆ ಆರಂಭಿಸಬೇಕು, ಹೊಸ ವಿದ್ಯುತ್ ಸಂಪರ್ಕ ಕೊಡಿ, ರೈತರ ಬೋರ್‌ವೆಲ್‌ಗಳಿಗೆ ಹೊಸದಾಗಿ ಆರ್‌ಆರ್ ನಂಬರ್ ಕೊಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಇಂಧನ ಸಚಿವ ಕೆ.ಜೆ.ಜಾರ್ಜ್ ಆಗಮನದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಚಿವರು ಪ್ರತಿಭಟನಾಕಾರರ ಬಳಿ ಬಂದು ರೈತರ ಸಮಸ್ಯೆಗಳನ್ನು ಆಲಿಸಿದರು.

ರೈತರ ಜಮೀನಿನಲ್ಲಿ ಹಾಯ್ದು ಹೋಗಿರುವ ಹಳೆಯ ಕಂಬ ಮತ್ತು ತಂತಿ ಬದಲಾಯಿಸಬೇಕು. ಓವರ್ ಲೋಡ್ ಆದ ಟಿಸಿಗಳನ್ನು ಅಪ್‌ಗ್ರೇಡ್ ಮಾಡಬೇಕು. ಈಗಾಗಲೇ ಇರುವ 110 ಕೆವಿ ಗ್ರಿಡ್‌ಗಳನ್ನು 220 ಕೆವಿಗೆ ಮತ್ತು 33 ಕೆವಿ ಇರುವ ಗ್ರಿಡ್‌ಗಳನ್ನು 110 ಕೆವಿಗೆ ಅಪ್‌ಗ್ರೇಡ್ ಮಾಡಬೇಕು. ರೈತರ ಬೋರ್‌ವೆಲ್‌ಗಳಿಗೆ ಹೊಸದಾಗಿ ಆರ್‌ಆರ್ ನಂಬರ್ ಒದಗಿಸಿಕೊಡುವಂತೆ ಆಗಬೇಕು, ಮಂಜೂರಾದ ಗ್ರಿಡ್‌ಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹಾವೇರಿ ತಾಲೂಕು ಹೊಂಬರಡಿ ಗುಡ್ಡದ ಸರ್ಕಾರಿ ಜಾಗದಲ್ಲಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಬೇಕು. ರಟ್ಟಿಹಳ್ಳಿ ತಾಲೂಕಿನ ವಿದ್ಯುತ್ ಸೆಕ್ಷನ್ ಅನ್ನು ಎರಡು 2 ಸೆಕ್ಷನ್‌ಗಳಾಗಿ ವಿಂಗಡಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ಸರಿಯಾಗಿ ಏಳು ಗಂಟೆ ವಿದ್ಯುತ್ ಕೊಡಿ. ನಮ್ಮಲ್ಲಿ ಬಹುತೇಕ 500 ಅಡಿಗಿಂತ ಆಳವಾದ ಬೋರ್‌ವೆಲ್‌ಗಳಿವೆ. ಸೋಲಾರ್ ಪಂಪ್‌ಸೆಂಟ್ 500 ಅಡಿಗಿಂತ ಕೆಳಗೆ ಹೆಚ್ಚು ನೀರೆತ್ತುವುದಿಲ್ಲ. ಹೆಚ್ಚು ಸಮಯ ಬರುವುದಿಲ್ಲ. ಯಾರು ಕೇಳುತ್ತಾರೆ ಅವರಿಗೆ ಕೊಡಿ. ಉಳಿದವರಿಗೆ ವಿದ್ಯುತ್ ಸಂಪರ್ಕ ಕೊಡಿ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೆರ, ಮಲ್ಲಿಕಾರ್ಜುನ ಬಳ್ಳಾರಿ, ಅಡಿವೆಪ್ಪ ಆಲದಕಟ್ಟಿ, ದಿಳ್ಳೆಪ್ಪ ಮಣ್ಣೂರ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ರುದ್ರಗೌಡ ಕಾಡನಗೌಡ್ರ, ಶಿವಬಸಪ್ಪ ಗೊವಿ, ಗಂಗನಗೌಡ ಮುದಿಗೌಡ್ರ, ಪ್ರಭುಗೌಡ ಪ್ಯಾಟಿ, ಶಂಕರಗೌಡ ಶಿರಗೂಂಬಿ, ಸುರೇಶ ಹೊನ್ನಪ್ಪನವರ, ಸಿದ್ದಪ್ಪ ಕುಪ್ಪೆಲೂರ, ಚನ್ನಪ್ಪ ಮರಡೂರ, ಮುತ್ತು ಗುಡಗೇರಿ, ಇತರರು ಪಾಲ್ಗೊಂಡಿದ್ದರು.

ಏಳು ತಾಸು ಕರೆಂಟ್ ಕೊಡುತ್ತೇವೆ, ಜಾರ್ಜ್

ಈಗಾಗಲೇ ನಾವು ಎಲ್ಲೆಡೆ ಏಳು ಗಂಟೆ ಕರೆಂಟ್ ಕೊಡುತ್ತಿದ್ದೇವೆ. ಕೆಲವೆಡೆ ಸಮಸ್ಯೆ ಇದ್ದಲ್ಲಿ ಮಾತ್ರ ಕಡಿಮೆಯಾಗಿದೆ. ನಿಮಗೆ ತೊಂದರೆ ಆಗಿದ್ದರೆ ಅಧಿಕಾರಿಗಳ ಗಮನಕ್ಕೆ ತನ್ನಿ, ನಾವು ಸರಿಪಡಿಸುತ್ತೇವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಪಂಪ್‌ಸೆಟ್‌ಗಳ ಅಕ್ರಮ ಸಕ್ರಮ ಯೋಜನೆ 2004ರಿಂದ ಆರಂಭವಾಗಿದ್ದು, 2023ರವರೆಗೆ ಮುಂದುವರಿದಿತ್ತು. ಕೆಲವರು 10 ರೂ.,ನಿಂದ 10 ಸಾವಿರ ರೂ.ವರೆಗೆ ಪಾವತಿಸಿದ್ದಾರೆ. ಹೊಲದಿಂದ 500 ಮೀ ಒಳಗಿದ್ದೆರೆ ಟಿಸಿ ಇದ್ದರೆ ನಾವೇ ಸಂಪರ್ಕ ಕೊಡುತ್ತೇವೆ. 500 ಮೀ.ಗಿಂತ ಹೊರಗೆ ಇದ್ದರೆ ಕುಸುಮ ಬಿ ಅಡಿ ಸಂಪರ್ಕ ಪಡೆಯಬಹುದು. ಸೋಲಾರ್ ಯೋಜನೆ ಚೆನ್ನಾಗಿದೆ. ಸಿಎಂ ಜತೆ ಮತ್ತೊಮ್ಮೆ ಕ್ಯಾಬಿನೆಟ್‌ನಲ್ಲಿ ಚರ್ಚಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net