ಸ್ಮಶಾನದಲ್ಲಿ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡ ತೆರವುಗೊಳಿಸಿ; ಡಿಸಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯ

Published on

ಹಾವೇರಿ: ನಗರದ ದಾನಮ್ಮ ದೇವಿ ದೇವಸ್ಥಾನದ ಎದುರು ಇರುವ ಸ್ಮಶಾನ ಜಾಗದಲ್ಲಿ ಕಾನೂನು ಬಾಹಿರವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರಗೆ ಪತ್ರ ಬರೆದಿದ್ದಾರೆ.

ಹಾವೇರಿ ನಗರಸಭೆ ವ್ಯಾಪ್ತಿಯ ಸಿಟಿ ಸರ್ವೆ ನಂಬರ್ 181/ ಎ1/ ಎ4 ನಲ್ಲಿ ಮುಸ್ಲಿಂ ಸಮಾಜದ ಸ್ಮಶಾನಕ್ಕೆ ಮಂಜೂರಾದ ಜಾಗೆಯಲ್ಲಿ ಕಾನೂನುಬಾಹಿರವಾಗಿ ವಾಣಿಜ್ಯ ಮಳಿಗೆಗಳನ್ನು ಕಟ್ಟಲಾಗುತ್ತಿದೆ. ಈ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಹಾವೇರಿಯ ಸಾರ್ವಜನಿಕರು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಸರ್ಕಾರದಿಂದ ಅನುಮೋದನೆಯಾಗಿರುವ ಹಾವೇರಿ ನಗರದ ಮಹಾಯೋಜನೆ (ಪ-1) 2031ರಲ್ಲಿ ಈ ಜಮೀನನ್ನು ಉದ್ಯಾನವನ ವಲಯಕ್ಕೆ ಕಾಯ್ದಿರಿಸಲಾಗಿದೆ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸ್ಪಷ್ಟ ಅಭಿಪ್ರಾಯ ನೀಡಿದ್ದಾರೆ. ಹಾಗಾಗಿ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಜಾಗಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಶೀಘ್ರವೇ ಅನಧಿಕೃತ ಕಟ್ಟಡ ತೆರವುಗೊಳಿಸಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಜೋಶಿ ಪತ್ರಮುಖೇನ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net