12 ಹೊಸ ಮರಳು ಬ್ಲಾಕ್ ಆರಂಭಕ್ಕೆ ಸಿದ್ಧತೆ; ಸರ್ಕಾರಕ್ಕೆ ಬರಲಿದೆ ಕೋಟ್ಯಂತರ ರೂ. ಆದಾಯ; ಗಣಿ ಮತ್ತು ಭೂವಿಜ್ಞಾನ ಇಲಾಖೆ ಕ್ರಮ; ‘ವಿಜಯವಾಣಿ’ ಸರಣಿ ವರದಿ ಪರಿಣಾಮ

3 HVR 2
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆದಿರುವ ಮರಳು ದಂಧೆಗೆ ಬ್ರೇಕ್ ಹಾಕಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಸ್ಟರ್ ಪ್ಲಾೃನ್ ರೂಪಿಸಿದ್ದು, ಹೊಸದಾಗಿ 12 ಮರಳು ಬ್ಲಾಕ್ ಆರಂಭಿಸಲು ಸಿದ್ಧತೆ ನಡೆಸಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಆದಾಯ ಬರಲಿದ್ದು, ಅಕ್ರಮ ಮರಳು ದಂಧೆಗೆ ಕೊಂಚ ಕಡಿವಾಣ ಬೀಳುವ ಸಾಧ್ಯತೆ ಗೋಚರಿಸುತ್ತಿದೆ.

ಜಿಲ್ಲೆಯಲ್ಲಿ ಸದ್ಯಕ್ಕೆ ಹಟ್ಟಿ ಚಿನ್ನದ ಗಣಿ ಕಂಪನಿ ನಿಗಮದ ಐದು ಮರಳು ಪಾಯಿಂಟ್‌ಗಳು ಮಾತ್ರ ಅಧಿಕೃತ ಪಾಯಿಂಟ್‌ಗಳಾಗಿವೆ. ಉಳಿದ ಹಲವು ಕಡೆಗಳಲ್ಲಿ ಮರಳು ದಂಧೆಕೋರರು ಅಕ್ರಮವಾಗಿ ರಾಜಾರೋಷವಾಗಿ ನದಿಯ ಒಡಲಿಗೆ ಕನ್ನ ಹಾಕುತ್ತಿದ್ದಾರೆ. ಇದರಿಂದ ನೈಸರ್ಗಿಕ ಸಂಪತ್ತಿಗೆ ದಕ್ಕೆ ಉಂಟಾಗುತ್ತಿರುವುದಲ್ಲದೇ ಸರ್ಕಾರದ ಕೋಟ್ಯಂತರ ರೂ. ಆದಾಯಕ್ಕೂ ಕತ್ತರಿ ಬೀಳುತ್ತಿದೆ.

ಈ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲೆಯ ಹಿರಿಯ ಭೂವಿಜ್ಞಾನಿಯವರ ಕಚೇರಿ ಸರ್ಕಾರದ ಅನುಮತಿ ಪಡೆದುಕೊಂಡು ಕರ್ನಾಟಕ ಮರಳು ನೀತಿ ಮತ್ತು ಮರಳು ನೀತಿ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಮರಳು ಗಣಿಗಾರಿಕೆ, ಸಂಗ್ರಹಣೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ 12 ಹೊಸ ಪಾಯಿಂಟ್‌ಗಳ ಆರಂಭಕ್ಕೆ ಟೆಕ್ನಿಕಲ್ ಆ್ಯಂಡ್ ಫೈನಾನ್ಸಿಯಲ್ ಟೆಂಡರ್ ಕರೆದಿದೆ. ಟೆಂಡರ್ ಪೂರ್ಣಗೊಂಡರೆ ಜಿಲ್ಲೆಯಲ್ಲಿ ಒಟ್ಟು 17 ಪಾಯಿಂಟ್‌ಗಳು ಆಗುತ್ತವೆ.

ಜಿಲ್ಲೆಯ ತುಂಗಭದ್ರಾ ನದಿ ಪಾತ್ರದಲ್ಲಿ ಮರಳಿನ ಬ್ಲಾಕ್‌ಗಳನ್ನು ಆರಂಭಿಸುವುದು, ಐದು ವರ್ಷಗಳ ವರೆಗೆ ಅಧಿಕೃತವಾಗಿ ಸರ್ಕಾರದ ನಿಯಮಗಳಿಗೆ ಅನ್ವಯಿಸುವಂತೆ ಕಾರ್ಯಾಚರಣೆ ನಡೆಸಲು ಇ- ಪ್ರೋಕ್ಯೂರ್‌ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ ಎಂದು ಇಲಾಖೆಯಹಿರಿಯ ಭೂವಿಜ್ಞಾನಿ ನವೀನ ಪಿ.ಎಸ್. ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಹೊಸ ಪಾಯಿಂಟ್‌ಗಳ ಪಟ್ಟಿ ?

ಜಿಲ್ಲೆಯಲ್ಲಿ ಹರಿದಿರುವ ತುಂಗಭದ್ರಾ ನದಿಯ ಪಾತ್ರದಲ್ಲಿ ಹೊಸ 12 ಪಾಯಿಂಟ್‌ಗಳನ್ನು ಗಣಿ ಮತ್ತು ಭೂವಿಜ್ಞಾನ ಲಾಖೆ ಗುರುತಿಸಿದೆ. ರಾಣೆಬೆನ್ನೂರ ತಾಲೂಕಿನ ಚಂದ್ರಾಪುರದಲ್ಲಿ 1, ಹೊಳೆಆನ್ವೇರಿ 1, ಪತ್ತೇಪುರ 1, ಹರನಗಿರಿ 2, ಐರಣಿಯಲ್ಲಿ 2, ಹಾವೇರಿ ತಾಲೂಕು ಹಾವನೂರಲ್ಲಿ 2, ರಾಣೆಬೆನ್ನೂರ ಉದಗಟ್ಟಿಯಲ್ಲಿ 1, ಮೆಡ್ಲೇರಿಯಲ್ಲಿ 1 ಬ್ಲಾಕ್‌ಗಳಲ್ಲಿ ಮರಳು ಗಣಿಗಾರಿಕೆ ಆರಂಭಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.

5 ಹಾಲಿ ಅಧಿಕೃತ ಬ್ಲಾಕ್‌ಗಳು

ಜಿಲ್ಲೆಯಲ್ಲಿ ಸದ್ಯಕ್ಕೆ ಹಟ್ಟಿ ಚಿನ್ನದ ಗಣಿ ಕಂಪನಿಗೆ ಐದು ಕಡೆಗಳಲ್ಲಿ ಮಾತ್ರ ಅಧಿಕೃತ ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡಿದೆ. ರಾಣೆಬೆನ್ನೂರ ತಾಲೂಕಿನ ಚಿಕ್ಕಕುರವತ್ತಿ ಗ್ರಾಮದಲ್ಲಿ 1, ಬೇಲೂರು ಗ್ರಾಮದಲ್ಲಿ 2, ಚಂದಾಪುರದಲ್ಲಿ 1, ಹಾವೇರಿ ತಾಲೂಕಿನ ಗಳಗನಾಥದಲ್ಲಿ 1 ಬ್ಲಾಕ್‌ಗೆ ಇಲಾಖೆ ಅನುಮತಿ ನೀಡಿದೆ. ಆದರೆ, ಅನಧಿಕೃತವಾಗಿ ಲೆಕ್ಕವಿಲ್ಲದಷ್ಟು ಕಡೆಗಳಲ್ಲಿ ಮರಳು ಸಂಗ್ರಹಿಸಲಾಗುತ್ತಿದೆ.

‘ವಿಜಯವಾಣಿ’ ಸರಣಿ ವರದಿ ಪರಿಣಾಮ

ಜಿಲ್ಲೆಯಲ್ಲಿ ನಡೆದಿರುವ ಮರಳು ಅಕ್ರಮದ ಕುರಿತು ಕಳೆದ ವರ್ಷ ‘ವಿಜಯವಾಣಿ’ ಸರಣಿ ವರದಿ ಪ್ರಕಟಿಸಿತ್ತು. ಅಕ್ರಮವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. 5 ಅಧಿಕೃತ ಪಾಯಿಂಟ್, 50ಕ್ಕೂ ಅಧಿಕ ಅನಧಿಕೃತ ಪಾಯಿಂಟ್‌ಗಳು ಎಂಬ ಶೀರ್ಷಿಕೆಯಡಿ ಸರ್ಕಾರಕ್ಕೆ ಆಗುತ್ತಿರುವ ನಷ್ಟ ಹಾಗೂ ಅಧಿಕಾರಿಗಳೂ ಶಾಮೀಲಾಗಿರುವ ಕುರಿತು ವಿವರಿಸಿತ್ತು. ಪತ್ರಿಕೆಯ ವರದಿಗೆ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು, ಅಗತ್ಯ ಕ್ರಮ ಜರುಗಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಹೊಸ ಪಾಯಿಂಟ್ ಆರಂಭಕ್ಕೆ ಸಿದ್ಧತೆ ನಡೆಸಿದೆ.

ಕೋಟ್:

ಅಕ್ರಮ ಮರಳು ದಂಧೆ ತಡೆಗಾಗಿ ಇಲಾಖೆಯಿಂದ 12 ಹೊಸ ಪಾಯಿಂಟ್‌ಗೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಿಗಲಿದೆ. ಅಕ್ರಮವಾಗಿ ಮರಳು ಸಾಗಿಸುವವರ ಪತ್ತೆಗಾಗಿ ಹಗಲು- ರಾತ್ರಿ ನಿಗಾ ಇಡಲಾಗಿದೆ. ದೂರು ಬಂದ ಕಡೆಗಳಲ್ಲಿ ಕೂಡಲೇ ದಾಳಿ ನಡೆಸಿ, ಸೂಕ್ತ ಕ್ರಮ ಜರುಗಿಸಲಾಗುತ್ತಿದೆ.

- ನವೀನ ಪಿ.ಎಸ್., ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net