ಕೆರೆಗಳ ತುಂಬಿಸಿದ ಭಗೀರಥ ಬಸವರಾಜ ಬೊಮ್ಮಾಯಿ: ಹುಕ್ಕೇರಿ ಮಠದ ಶ್ರೀ

28 HVR 2 B
Published on

ಹಾವೇರಿ: ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ಭಗೀರಥ ಪ್ರಯತ್ನದ ಮೂಲಕ ಅವರ ಕ್ಷೇತ್ರದ ನೂರಾರು ಕೆರೆಗಳನ್ನು ತುಂಬಿಸಿ, ಕುಡಿಯುವ ನೀರಿಗೆ ಶಾಶ್ವತ ಯೋಜನೆಗಳನ್ನು ರೂಪಿಸುವ ಮೂಲಕ ಹಸಿರು ಕ್ರಾಂತಿ ಮಾಡಿದ್ದಾರೆ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಬಸವರಾಜ ಬೊಮ್ಮಾಯಿ ಅವರ 65ನೇ ಜನ್ಮದಿನದ ನಿಮಿತ್ತ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದ ವತಿಯಿಂದ ನಗರದ ಗಾಂಧೀ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ನೀರಾವರಿ ಕ್ಷೇತ್ರದಲ್ಲಿ ಅನೇಕ ಯಶಸ್ವಿ ಯೋಜನೆಗಳನ್ನು ಜಾರಿಗೊಳಿಸಿರುವ ಬೊಮ್ಮಾಯಿ ಅವರ ಜನಪರ ಕಾಳಜಿ ಮೆಚ್ಚುವಂಥದ್ದು ಎಂದರು.

ರಾಜಕಾರಣ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಕಲಾ ರಂಗದಲ್ಲಿ ಅವರ ಬೆಳವಣಿಗೆ ಎಲ್ಲರೂ ಕಣ್ಣರಳಿಸಿ ನೋಡುವಂಥದ್ದು. ಎಲ್ಲರೂ ಹುಟ್ಟಿ, ಸತ್ತು ತಮ್ಮ ಜೀವನ ಕಳೆಯುತ್ತಾರೆ. ಕೆಲವರು ಮಾತ್ರ ಸತ್ತ ನಂತರವೂ ತಮ್ಮ ಹೆಸರು ಅಜರಾಮರವಾಗಿ ಇರುವಂತೆ ಮಾಡುತ್ತಾರೆ. ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರ ಹಾದಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ನಡೆಯುವ ಮೂಲಕ ತಮ್ಮ ಕುಟುಂಬಕ್ಕೆ ಸುವರ್ಣ ಕಿರೀಟವನ್ನು ಇರಿಸಿದ್ದಾರೆ ಎಂದರು.

ಒಬ್ಬ ಜಂಗಮನಿಗೆ ಹೊಟ್ಟೆ ತುಂಬ ಉಣಿಸಿ ತೃಪ್ತಿಪಡಿಸಿದರೆ ಕೋಟಿ ಸಲ ಶಿವನಿಗೆ ಪೂಜಿಸಿದಂತೆ. ಇಂದು 108 ಜಂಗಮರನ್ನು ಒಂದೆಡೆ ಸೇರಿಸಿ ಅವರಿಗೆ ಊಟ, ವಸ್ತ್ರ ದಾನ ಮಾಡುವುದು ಹೊಸ ಪದ್ಧತಿಗೆ ನಾಂದಿ ಹಾಡಿದಂತಾಗಿದೆ. ಸೋಲೇ ಗೆಲುವಿನ ಸೋಪಾನ. ಭರತ ಬೊಮ್ಮಾಯಿ ಅವರು ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ. ಜನಸೇವೆಯೇ ಜನಾರ್ಧನ ಸೇವೆ ಎಂದು ಮುನ್ನಡೆಯಲಿ. ಉತ್ತಮವಾದ ಭವಿಷ್ಯ ದೊರೆಯಲಿ ಎಂದು ಶುಭ ಹಾರೈಸಿದರು.

ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಒಬ್ಬ ವ್ಯಕ್ತಿ ಅಧಿಕಾರದಲ್ಲಿ ಇರುವಂಥ ಸಂದರ್ಭದಲ್ಲಿ ಜನ ಸೇರುವುದು ದೊಡ್ಡದಲ್ಲ. ಬೊಮ್ಮಾಯಿ ಅವರು ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಕೂಡ ಅವರ ಜನ್ಮದಿನಾಚರಣೆಗೆ ಇಷ್ಟೊಂದು ಜನ ಸೇರಿರುವುದು ಅವರ ಜನಪರ ಕಾರ್ಯಕ್ರಮಗಳು ಮತ್ತು ಅವರ ಜನಪ್ರಿಯತೆಯಿಂದಾಗಿ ಎಂದು ಹೇಳಬಹುದು ಎಂದರು.

ಹರಸೂರ ಬಣ್ಣದ ಮಠದ ಶ್ರೀಗಳು, ಹೊಸಮಠದ ಶ್ರೀಗಳು, ಸುರೇಶ ಹೊಸಮನಿ, ನಂಜುಂಡೇಶ ಕಳ್ಳೇರ, ಪ್ರಭು ಹಿಟ್ನಳ್ಳಿ, ಡಿ.ಎಸ್.ಮಳಗಿ, ಮುರಿಗೆಪ್ಪ ಶೆಟ್ಟರ್, ಪರಮೇಶ್ವರಪ್ಪ ಮೇಗಳಮನಿ, ಸಿದ್ದಲಿಂಗಯ್ಯ ಶಾಸ್ತ್ರೀ, ಇತರರಿದ್ದರು.

108 ಜಂಗಮ ವಟುಗಳಿಗೆ ಸನ್ಮಾನ

ಹಾವೇರಿ ನಗರ ಜಂಗಮ ಅರ್ಚಕ ಧಾರ್ಮಿಕ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು, ಸಿಂದಗಿ ಮಠದ ವಟುಗಳು ಸೇರಿ ಒಟ್ಟು 108 ಜಂಗಮ ವಟುಗಳಿಗೆ ಭರತ ಬೊಮ್ಮಾಯಿ ಗೌರವ ಸನ್ಮಾನ ಮಾಡಿದರು. ವಸ್ತ್ರ, ಪೂಜಾ ಸಾಮಗ್ರಿಗಳನ್ನು ಉಡುಗೊರೆಯಾಗಿ ಕೊಟ್ಟರು. ಸಮಿತಿಯ ವತಿಯಿಂದ ಭರತ ಅವರನ್ನು ಸನ್ಮಾನಿಸಲಾಯಿತು.

ಕೋಟ್:

ನಮ್ಮ ತಂದೆಯವರು ಅಭಿಮಾನಿಗಳು ಅವರ ಜನ್ಮದಿನವನ್ನು ಅರ್ಥಪೂರ್ಣವಾದ ಕಾರ್ಯಕ್ರಮದ ಮೂಲಕ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ನಮ್ಮ ತಂದೆಯವರು, ಅಜ್ಜನವರು ನಡೆದ ಹಾದಿಯಲ್ಲಿ ನಾನೂ ನಡೆಯುತ್ತೇನೆ. ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಜನಸೇವೆ ಮಾಡಲು ಸದಾ ಸಿದ್ಧನಾಗಿರುತ್ತೇನೆ.

- ಭರತ ಬೊಮ್ಮಾಯಿ, ಬಸವರಾಜ ಬೊಮ್ಮಾಯಿ ಪುತ್ರ  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net