

ಹಾವೇರಿ: ಇಲ್ಲಿನ ನೂತನ ಹಾವೇರಿ ಮೆಡಿಕಲ್ ವೈದ್ಯಕೀಯ ಸಂಸ್ಥೆಯ 2022- 23ನೇ ಸಾಲಿನ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ನೋಂದಣಿ ಸಂಖ್ಯೆ (ಯೂಸರ್ ಐಡಿ) ಕೊನೆಯ ದಿನಾಂಕದಂದು ದೊರೆತ ಕಾರಣ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಹಾಗಾಗಿ, ಈ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಎಸ್‌ಎಫ್‌ಐ ವತಿಯಿಂದ ನಗರದಲ್ಲಿ ಬುಧವಾರ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ತಾಲೂಕಿನ ದೇವಗಿರಿಯಲ್ಲಿರುವ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ತಾತ್ಕಾಲಿಕವಾಗಿ ಆರಂಭವಾಗಿರುವ ಮೆಡಿಕಲ್ ಕಾಲೇಜಿನ ಮೊದಲ ಬ್ಯಾಚ್‌ನಲ್ಲಿ 149 ವಿದ್ಯಾರ್ಥಿಗಳು ವ್ಯಾಸಂಗ ಮನಾಡುತ್ತಿದ್ದಾರೆ. 101 ಒಬಿಸಿ ವಿದ್ಯಾರ್ಥಿಗಳಿದ್ದು, 27 ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿದ್ದಾರೆ. ಒಬಿಸಿ ವಿದ್ಯಾರ್ಥಿಗಳ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಆದರೆ, 27 ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ದಿನಾಂಕದ ಕೊನೆಯ ದಿನದಂದು ಸ್ಟೂಡೆಂಟ್ ಯೂಸರ್ ಐಡಿ ದೊರೆತ ಕಾರಣ ಅರ್ಜಿ ಸಲ್ಲಿಸಲು ಆಗಿಲ್ಲ.
ಪತ್ರಿ ವಿದ್ಯಾರ್ಥಿಗೆ ತಲಾ 1,00,000 ರೂ.ಗಿಂತ ಹೆಚ್ಚು ವಿದ್ಯಾರ್ಥಿ ವೇತನ ದೊರೆಯುತ್ತದೆ. ಇದರಿಂದ ವಿದ್ಯಾಭ್ಯಾಸ, ಊಟಕ್ಕೆ ಸಹಕಾರಿಯಾಗುತ್ತಿತ್ತು. ಇದೀಗ ಮೆಸ್ ಬಿಲ್ ಕಟ್ಟಲೂ ಆಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಜಿಲ್ಲಾಧಿಕಾರಿ, ಜಿಪಂ ಸಿಇಒ, ಸೇರಿ ಇತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ, ಅರ್ಜಿ ದಿನಾಂಕ ವಿಸ್ತರಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ಉಪಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ತುರ್ತಾಗಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ಅಭಿಷೇಕ ಗುದಗಿ, ಅಭಿಷೇಕ, ಗೌತಮ, ತುಕರಾಮ, ಮಾಲತೇಶ, ಬಾನುಪ್ರಕಾಶ, ಮಿಥುನ, ಮಲ್ಲಿಕಾರ್ಜುನ, ಇತರರಿದ್ದರು.