ಹಾವೇರಿ ವೈದ್ಯಕೀಯ ಕಾಲೇಜು ಉದ್ಘಾಟನೆ ಸನ್ನಿಹಿತ

27 HVR 6 A
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಜಿಲ್ಲೆಯ ಜನರ ಬಹುನಿರೀಕ್ಷಿತ ಹಾವೇರಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ(ಹಿಮ್ಸ್)ದ ಮೊದಲ ವರ್ಷದ ಫೌಂಡೇಶನ್ ಕೋರ್ಸ್‌ಗೆ ದೇವಗಿರಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಚಾಲನೆ ದೊರೆತಿದೆ. ದೇವಗಿರಿ ಯಲ್ಲಾಪುರದ ಮೆಡಿಕಲ್ ಕಾಲೇಜಿನ ಮೊದಲ ಹಂತದ ಕಟ್ಟಡ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಉದ್ಘಾಟನೆಯ ಕಾಲ ಸನ್ನಿಹಿತವಾಗಿದೆ.
ನ್ಯಾಷನಲ್ ಮೆಡಿಕಲ್ ಕೌನ್ಸಿಲ್ (ಎನ್‌ಎಂಸಿ) ನಿಯಮಾವಳಿ ಪ್ರಕಾರ 150 ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಎರಡನೇ ಮಹಡಿಯ 11 ಕೊಠಡಿಗಳಲ್ಲಿ ಫೌಂಡೇಶನ್ ಕೋರ್ಸ್ ತರಗತಿ ಪ್ರಾರಂಭವಾಗಿವೆ. ಎನ್‌ಎಂಸಿ ನಿಯಮದ ಪ್ರಕಾರ ಲ್ಯಾಬ್, ಗ್ರಂಥಾಲಯ, ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ಹುಬ್ಬಳ್ಳಿಯ ಕಿಮ್ಸ್‌ನ ಹಿರಿಯ ಪ್ರಾಧ್ಯಾಪಕರು ಸೇರಿದಂತೆ ಹಲವು ಪರಿಣಿತರಿಂದ ತರಗತಿಗಳು ನಡೆಯುತ್ತಿವೆ. ಒಂದು ತಿಂಗಳ ಫೌಂಡೇಶನ್ ಕೋರ್ಸ್ ವಾರದೊಳಗೆ ಮುಕ್ತಾಯಗೊಳ್ಳಲಿದೆ. ಹೊಸ ಕಟ್ಟಡ ಉದ್ಘಾಟನೆ ಬಳಿಕ ಪಠ್ಯದ ಪ್ರಕಾರ ತರಗತಿಗಳು ಪ್ರಾರಂಭವಾಗುವ ನಿರೀಕ್ಷೆ ಇದೆ.
ಇದೇ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ವಸತಿ ಸೌಕರ್ಯ ನೀಡಲಾಗಿದೆ. ತರಗತಿಗೆ 149 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದರಿಂದ ಒಬ್ಬ ವಿದ್ಯಾರ್ಥಿ ಸಂಖ್ಯೆ ಕಡಿಮೆಯಾಗಿದೆ. ಡಿಸಿ ಕಚೇರಿ ರಸ್ತೆಯ ದೇವಗಿರಿ ಯಲ್ಲಾಪುರದಲ್ಲಿ ಹಿಮ್ಸ್ ಕಟ್ಟಡ ಭರದಿಂದ ಸಾಗಿದೆ. ಸುಮಾರು 2-3 ತಿಂಗಳಲ್ಲಿ ಕಾಲೇಜು ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ವಿಧಾನಸಭಾ ಚುನಾವಣೆಗೂ ಮುನ್ನವೇ ಮೊದಲ ಮಹಡಿ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟಿಸುವ ತರಾತುರಿಯಲ್ಲಿದೆ ರಾಜ್ಯ ಸರ್ಕಾರ.
ವೈದ್ಯಕೀಯ ಶಿಕ್ಷಣ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳು ಒಂದು ತಿಂಗಳು ಫೌಂಡೇಶನ್ ಕೋರ್ಸ್ ಪಡೆದುಕೊಳ್ಳುವುದು ಕಡ್ಡಾಯ. ವೈದ್ಯರು ಎಂದರೇನು ? ಆಸ್ಪತ್ರೆ ಆಡಳಿತ, ವ್ಯವಸ್ಥೆ ಹೇಗಿರುತ್ತದೆ ? ಎಂಬಿತ್ಯಾದಿ ಮಹತ್ವದ ಅಂಶಗಳನ್ನು ತಜ್ಞರು ತಿಳಿಸಿಕೊಡುತ್ತಾರೆ. ಈ ಕೋರ್ಸ್ ಈಗಾಗಲೇ ಆರಂಭವಾಗಿದ್ದು, ಒಂದು ವಾರದೊಳಗೆ ಮುಕ್ತಾಯಗೊಳ್ಳಲಿದೆ.

ಶೇ.95ರಷ್ಟು ಕಾಮಗಾರಿ ಪೂರ್ಣ
ಹೈದರಾಬಾದ್‌ನ ಕೆ.ಬಿ.ಆರ್. ಕನ್ಸಟ್ರಕ್ಷನ್ ಕಂಪನಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಿಸುತ್ತಿದೆ. ಮೊದಲ ಹಂತದಲ್ಲಿ ಮೊದಲ ಮಹಡಿಯಲ್ಲಿರುವ ಆಡಳಿತ ಕಚೇರಿ ಹಾಗೂ ಎರಡು ತರಗತಿ ಕೊಠಡಿಗಳ ಕಾಮಗಾರಿ ಶೇ.95ರಷ್ಟು ಪೂರ್ಣಗೊಂಡಿದೆ. ಎರಡು ವಾರದಲ್ಲಿ ಬಾಕಿ ಕೆಲಸ ಪೂರ್ಣಗೊಳ್ಳಲಿದ್ದು, ತರಗತಿ ಆರಂಭಕ್ಕೆ ತೊಂದರೆ ಇಲ್ಲ. ಉಳಿದಂತೆ ಎರಡನೇ ಹಂತದ ಕಟ್ಟಡ, ಹಾಸ್ಟೆಲ್ ಕಾಮಗಾರಿ ಜುಲೈ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ಜಿಪಂ ಸಿಇಒ ಹಾಗೂ ಹಿಮ್ಸ್ ಕಟ್ಟಡದ ನೋಡೆಲ್ ಆಫೀಸರ್ ಮಹಮ್ಮದ ರೋಷನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಕೋಟ್:
ಈಗಾಗಲೇ ನಿಯಮಾನುಸಾರ 79 ಬೋಧಕ, ಬೋಧಕೇತರ ಸಿಬ್ಬಂದಿ ನೇಮಕ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಶೀಘ್ರದಲ್ಲೇ ನೂತನ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದು, ಹೊಸ ಕಟ್ಟಡದ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತ ತಲುಪಿದೆ.
ಡಾ.ಉದಯ ಮುಳಗುಂದ, ನಿರ್ದೇಶಕ, ಹಾವೇರಿ ಮೆಡಿಕಲ್ ಕಾಲೇಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net