ತಾತ್ಕಾಲಿಕ ಸುಖಕ್ಕೆ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ; ಹಾವೇರಿ ಮೆಡಿಕಲ್ ಕಾಲೇಜ್‌ನಲ್ಲಿ ಡ್ರಗ್ಸ್ ಮುಕ್ತ ಅಭಿಯಾನದಲ್ಲಿ ಡಾ.ನಾರಾಯಣ ಪವಾರ ಕಿವಿಮಾತು

25 HVR 7 B
Published on

ಹಾವೇರಿ: ಮಾದಕ ದ್ರವ್ಯ ಸೇವನೆಯಿಂದ ವಿದ್ಯಾರ್ಥಿಗಳ ಜೀವನವೇ ನಾಶವಾಗುತ್ತದೆ. ಭವಿಷ್ಯವೂ ಹಾಳಾಗುತ್ತದೆ. ತಾತ್ಕಾಲಿಕ ಆನಂದಕ್ಕಾಗಿ ಮಾದಕ ವಸ್ತು ಸೇವಿಸಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದು ರಾಣೆಬೆನ್ನೂರಿನ ಆಯುರ್ವೇದಿಕ್ ವೈದ್ಯ ಡಾ.ನಾರಾಯಣ ಪವಾರ ಕಿವಿಮಾತು ಹೇಳಿದರು.

ರಾಷ್ಟ್ರ ಹಿತರಕ್ಷಣಾ ವೇದಿಕೆ ವತಿಯಿಂದ ಇಲ್ಲಿನ ದೇವಗಿರಿ ಯಲ್ಲಾಪುರದ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಡ್ರಗ್ಸ್ ಮುಕ್ತ ಹಾವೇರಿ ಜಿಲ್ಲೆ ಅಭಿಯಾನ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವೈದ್ಯಕೀಯ ಹಾಗೂ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ದ್ರವ್ಯ ಸೇವಿಸುತ್ತಾರೆ ಎಂಬ ತಪ್ಪು ಪರಿಕಲ್ಪನೆ ಸಮಾಜದಲ್ಲಿ ಬೆರೂರಿದೆ. ಎಲ್ಲರೂ ಒಗ್ಗಟ್ಟಾಗಿ ಇದನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಇಂದಿನ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವಿಸುವ ವ್ಯಕ್ತಿಗಳಿಂದ ದೂರವಿರಬೇಕು. ಅಲ್ಲದೇ ಮಾದಕ ವಸ್ತು ಮಹಿಳೆಯರಲ್ಲಿಯೂ ಅನೇಕ ಆರೋಗ್ಯ ಸಮಸ್ಯಗಳನ್ನು ಉಂಟುಮಾಡುತ್ತದೆ ಎಂದು ಎಚ್ಚರಿಸಿದರು.

ಹಾವೇರಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ಮಾತನಾಡಿ, ಹಾವೇರಿ ನಗರದಲ್ಲಿ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಜನರಲ್ಲಿ ಆರ್ಥಿಕ ಸೌಲಭ್ಯ ಹೆಚ್ಚಾದಂತೆ ದುಚ್ಚಟಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ವಿವಿಧ ಪ್ರಭಾವಕ್ಕೆ ಒಳಗಾಗಿ ತಪ್ಪು ಪರಿಕಲ್ಪನೆಗಳಿಂದ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇಂದಿನ ವೈದ್ಯಕೀಯ ವಿದ್ಯಾರ್ಥಿಗಳು ನಾಳಿನ ವೈದ್ಯರು. ಜನರ ಆರೋಗ್ಯದ ಬಗ್ಗೆ ಕಾಳಜಿ ತೋರುವ ಜವಾಬ್ದಾರಿ ನಿಮ್ಮ ಮೇಲಿದೆ. ಅಧ್ಯಯನದ ಒತ್ತಡ ಅಧಿಕ ಇದ್ದರೂ ಒತ್ತಡ ನಿವಾರಣೆಗಾಗಿ ಯಾವುದೇ ಮಾದಕ ವಸ್ತುಗಳನ್ನು ಸೇವಿಸಬಾರದು. ತಮ್ಮ ಉಜ್ವಲ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು ಎಂದರು.

ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಡಾ.ರವಿಕುಮಾರ ಮಲ್ಲಾಡದ ಮಾತನಾಡಿದರು.

ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾಚಾರ್ಯ ಡಾ.ಆಶಾಕಿರಣ ಎಸ್. ಮಾತನಾಡಿ, ಡ್ರಗ್ಸ್ ಮುಕ್ತ ಸಂಸ್ಥೆಯನ್ನಾಗಿಸಲು ಕಾರ್ಯನಿರ್ವಹಿಸುತ್ತೇವೆ. ಅಲ್ಲದೇ ವಿದ್ಯಾರ್ಥಿಗಳಿಗೆ ಅಧ್ಯಯನದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತೇವೆ ಎಂದು ಭರವಸೆ ನೀಡಿದರು.

ಡಾ.ಸಂತೋಷ ಆಲದಕಟ್ಟಿ ಪ್ರತಿಜ್ಞಾ ವಿಧಿ ಭೋದಿಸಿದರು. ಕಿರಣಕುಮಾರ ಕೋಣನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಯಾನದ ಸಂಚಾಲಕ ವಿನಯ ತಹಶೀಲ್ದಾರ, ಅಮೀತಗೌಡ ಪಾಟೀಲ, ಪ್ರವೀಣ ಅಂಗರಗಟ್ಟಿ, ಮೇಗರಾಜ ಉಪಸ್ಥಿತರಿದ್ದರು. ನಾಗರಾಜ ಕೋಡಬಾಳ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net