ಮಕ್ಕಳ ರೋಗಗಳ ಕುರಿತು ವೈದ್ಯಕೀಯ ಸಮ್ಮೇಳನ 25ರಂದು; ಹಾವೇರಿ ಮೆಡಿಕಲ್ ಕಾಲೇಜ್‌ನಲ್ಲಿ ಆಯೋಜನೆ

Dr.Rajakumar Marol
Published on

ಹಾವೇರಿ: ಭಾರತೀಯ ಮಕ್ಕಳ ವೈದ್ಯರ ಸಂಘದಿಂದ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೇ 25ರಂದು ಬೆಳಗ್ಗೆ 8 ಹಾವೇರಿ ಮೆಡಿಕಲ್ ಕಾಲೇಜ್ ಸಭಾಂಗಣದಲ್ಲಿ ‘ಮಕ್ಕಳಲ್ಲಿ ಬರುವ ಸಾಂಕ್ರಾಮಿಕ ರೋಗಗಳ ಕುರಿತು’ ರಾಜ್ಯಮಟ್ಟದ ವೈದ್ಯಕೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸಾಂಕ್ರಾಮಿಕ ರೋಗಗಳ ವಿಭಾಗದ ರಾಜ್ಯಾಧ್ಯಕ್ಷ ಡಾ.ರಾಜಕುಮಾರ ಮರೋಳ ತಿಳಿಸಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ದೇಶದ ವಿವಿಧ ಮಕ್ಕಳ ತಜ್ಞರು ಭಾಗವಹಿಸಲಿದ್ದಾರೆ. ಉನ್ನತ ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹಾಗೂ ಮಕ್ಕಳ ವೈದ್ಯರಿಗೆ ಸಮಾವೇಶ ಮಹತ್ವದ್ದಾಗಿದೆ. ಸಮಾವೇಶದಲ್ಲಿ ತಾವು ರಚಿಸಿರುವ ‘ಕ್ರೇಡಲ್ ಟು ಕಿಂಡರ್ ಗಾರ್ಟನ್ ಎ ಸಿಂಪಲ್ ಗೈಡ್ ಟು ಪೇರೆಂಟ್ಸ್’ ಪುಸ್ತಕ ಬಿಡುಗಡೆ ಮಾಡಲಾಗುವುದು. ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ವಸಂತ ಕಲಾಸ್ಕರ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕಾರ್ಯದರ್ಶಿ ಡಾ.ಯೋಗೀಶ ಪಾರೀಬ, ಡಾ.ಭಾಸ್ಕರ ಶಣೈ, ಹಿಮ್ಸ್ ಡೀನ್ ಡಾ.ಪ್ರದೀಪಕುಮಾರ, ಡಾ.ಪಿ.ಆರ್ ಹಾವನೂರ, ಇತರರು ಭಾಗವಹಿಸಲಿದ್ದಾರೆ ಎಂದರು.

ಮಕ್ಕಳ ಮರಣದ ಪ್ರಮಾಣ ಕಡಿಮೆ ಮಾಡುವ ಕುರಿತು, ಮಕ್ಕಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಿಗೆ ಕಾರಣಗಳು ಹಾಗೂ ಪರಿಹಾರೋಪಾಯಗಳ ಬಗ್ಗೆ ನುರಿತ ವೈದ್ಯರು, ತಜ್ಞರು ವಿಶೇಷ ಉಪನ್ಯಾಸ ನೀಡುವರು. ಮಕ್ಕಳ ರೋಗ ನಿವಾರಣೆಗೆ ಅತ್ಯಾಧುನಿಕ ಸಂಶೋಧನೆಗಳು ಮತ್ತು ಉಪಚಾರದ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಸಮ್ಮೇಳನದ ಮೂಲಕ ಸರ್ಕಾರಗಳಿಗೆ ಅಗತ್ಯ ಸಲಹೆ, ಸೂಚನೆ ಹಾಗೂ ಪ್ರಸ್ತಾವನೆಗಳನ್ನು ಸಲ್ಲಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಡಾ.ಎಸ್.ಎಲ್ ಬಾಲೆಹೊಸೂರ, ಡಾ.ಬಸವರಾಜ ಕೊಳ್ಳಿ, ಡಾ.ಅಂಜನಕುಮಾರ, ಡಾ.ಲಕ್ಷ್ಮೀಪತಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net