

ಹಾವೇರಿ: ಜಿಲ್ಲೆಯಲ್ಲಿ ವಿಪರೀತವಾಗಿರುವ ಮಟ್ಕಾ ದಂಧೆ ತಡೆಗಾಗಿ ಹೆಚ್ಚಿನ ನಿಗಾ ವಹಿಸಲಾಗಿದೆ. ಇದಕ್ಕಾಗಿ ವಿಶೇಷ ತಂಡವನ್ನೂ ರಚಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ತಿಳಿಸಿದ್ದಾರೆ.
ರಾಣೆಬೆನ್ನೂರ, ರಟ್ಟಿಹಳ್ಳಿ, ಹಿರೇಕೆರೂರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಯುವಕರು, ಬಡ ಕೂಲಿ ಕಾರ್ಮಿಕರು ಹಾಗೂ ಅವರ ಕುಟುಂಬದವರು ಬೀದಿಗೆ ಬರುವಂತಾಗಿದೆ. 15 ದಿನಗಳಲ್ಲಿ 11 ಪ್ರಕರಣಗಳು ವರದಿಯಾಗಿವೆ. ಕೆಲವರು ರಾಜಾರೋಷವಾಗಿ ದಂಧೆ ನಡೆಸುತ್ತಿದ್ದಾರೆ. ಈ ಕುರಿತು ‘ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗಿದೆ ಮಟ್ಕಾ ದಂಧೆ’ ಎಂಬ ಶೀರ್ಷಿಕೆಯಡಿ ವಿಜಯವಾಣಿ ಆ.17ರಂದು ವಿಶೇಷ ವರದಿ ಪ್ರಕಟಿಸಿತ್ತು.
ವರದಿ ಬೆನ್ನಲ್ಲೇ ಎಸ್‌ಪಿ ಡಾ.ಶಿವಕುಮಾರ ಗುಣಾರೆ ಅವರು ವಿಶೇಷ ತಂಡ ರಚಿಸಲು ಮುಂದಾಗಿದ್ದಾರೆ. ಜತೆಗೆ ಅಧಿಕಾರಿ, ಸಿಬ್ಬಂದಿ ದಂಧೆಕೋರರಿಗೆ ಪರೋಕ್ಷವಾಗಿ ಬೆಂಬಲ ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.