ಸ್ವಾತಿ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ 23ರಂದು; ಪ್ರಕರಣ ಸಿಬಿಐಗೆ ವಹಿಸಿ; ಕ್ರಾಂತಿವೀರ ಬ್ರಿಗೇಡ್‌ನ ಕಾರ್ಯಾಧ್ಯಕ್ಷ ಕೆ.ಇ ಕಾಂತೇಶ ಆಗ್ರಹ

18 KE Kantesha
Published on

ಹಾವೇರಿ: ಜಿಲ್ಲೆಯ ಮಾಸೂರಿನ ಸ್ವಾತಿ ಬ್ಯಾಡಗಿ ಯುವತಿಯ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ಪ್ರಮುಖ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.23ರಂದು ಹಾವೇರಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿವೀರ ಬ್ರಿಗೇಡ್‌ನ ಕಾರ್ಯಾಧ್ಯಕ್ಷ ಕೆ.ಇ ಕಾಂತೇಶ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಹಿಂದುಳಿದ ವರ್ಗದವರು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಲವ್‌ಜಿಹಾದ್ ಹೆಸರಿನಲ್ಲಿ ನಯಾಜ್ ಎಂಬಾತ ಮಾರ್ಚ್‌ನಲ್ಲಿ ಮಾಸೂರಿನ ಸಹೋದರಿ ಸ್ವಾತಿಯ ಕಗ್ಗೊಲೆ ಮಾಡಿದ್ದಾನೆ. ಯುವತಿ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರೂ, ಮೃತದೇಹ ಸಿಕ್ಕ ಬಳಿಕ ತರಾತುರಿಯಲ್ಲಿ ಪೊಲೀಸರು ಅಂತ್ಯಕ್ರಿಯೆ ಮಾಡಿರುವುದು ಅನುಮಾನಕ್ಕೀಡು ಮಾಡುತ್ತಿದೆ. ಪ್ರಕರಣದಲ್ಲಿ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ದೂರಿದರು.

ಸ್ವಾತಿ ಕೊಲೆ ಖಂಡಿಸಿ ಏ.23ರಂದು ಬೆಳಗ್ಗೆ 11ಕ್ಕೆ ನ್ಯಾಯ ಜಾಥಾ ಹಮ್ಮಿಕೊಳ್ಳಲಾಗಿದೆ. ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಜಾಥಾ ಆರಂಭವಾಗಿ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು. ವಿವಿಧ ಮಠಾಧೀಶರು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಸೇರಿದಂತೆ ಹಲವು ಮುಖಂಡರು, ಗಣ್ಯರು, ಹಿಂದುಗಳು ಪಾಲ್ಗೊಳ್ಳಲಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪ್ರಮುಖ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಸ್ವಾತಿ ಕುಟುಂಬಸ್ಥರಿಗೆ ಕನಿಷ್ಠ 10 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡಬೇಕು. ಕುಟುಂಬದವರಿಗೆ ಸರ್ಕಾರಿ ನೌಕರಿಯನ್ನು ನೀಡಬೇಕೆಂದು ಒತ್ತಾಯಿಸಲಾಗುವುದು ಈ ಹಿನ್ನೆಲೆಯಲ್ಲಿ ಪಕ್ಷಭೇದ ಮರೆತು ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಜಾತಿಗಣತಿ ಮಂಡನೆ ಸ್ವಾಗತಾರ್ಹ. ಅದನ್ನು ಅನುಮೋದನೆ ಮಾಡಿ ಜಾರಿಗೆ ತರಬೇಕು. ವರದಿಯಲ್ಲಿ ಬದಲಾವಣೆ ಮಾಡಲು ಅವಕಾಶವಿದ್ದು, ಬದಲಾವಣೆ ಮಾಡಬಹುದು. ಸಿಎಂ ಸಿದ್ದರಾಮಯ್ಯ ಅವರು ಜಮೀರ್‌ಅಹ್ಮದ್ ಮಾತು ಕೇಳಿ ಕೇಳಿ ಹಾಳಾಗುತ್ತಿದ್ದಾರೆ. ಅದನ್ನು ಬಿಡಬೇಕು. ಹಿಂದುಳಿದ ವರ್ಗದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿದ್ದಣ್ಣ ಅಂಬಲಿ, ಉಜಿನೆಪ್ಪ ಕೋಡಿಹಳ್ಳಿ, ಅಶೋಕ ರಾಣೇಬೆನ್ನೂರ, ಭರಮಪ್ಪ ಉಲುಮಿ, ವಿರೂಪಾಕ್ಷಪ್ಪ ಬಸಾಪುರ, ಇತರರು ಇದ್ದರು.

ಬಿಜೆಪಿಯಲ್ಲಿ ಹಿಂದುಗಳ ಸೈಡ್‌ಲೈನ್ ಪಿತೂರಿ

ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಹಿಂದುಗಳನ್ನು ಸೈಡ್‌ಲೈನ್ ಮಾಡುವುದು ಹೊಸದೇನಲ್ಲ. ಸೈಡ್‌ಲೈನ್ ಮಾಡಲೆಂದೇ ವ್ಯವಸ್ಥಿತವಾಗಿ ಪಿತೂರಿ ನಡೆಸಲಾಗುತ್ತಿದೆ. ಇದರಿಂದ ಪಕ್ಷಕ್ಕೆ ಮತ್ತಷ್ಟು ಡ್ಯಾಮೇಜ್ ಆಗುತ್ತಿದೆ. ಇತ್ತೀಚೆಗೆ ನಮೋ ಆ್ಯಪ್‌ನಲ್ಲಿ ಅನ್‌ಫಾಲೋ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದಕ್ಕೆ ಉಚ್ಛಾಟನೆಗೊಂಡಿರುವ ಈಶ್ವರಪ್ಪನವರು, ಯತ್ನಾಳರು ಬಗ್ಗುವುದಿಲ್ಲ. ಆದಷ್ಟು ಶೀಘ್ರದಲ್ಲಿ ಕೆ.ಎಸ್ ಈಶ್ವರಪ್ಪ ಹಾಗೂ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿಗೆ ವಾಪಸ್ ಬರುತ್ತಾರೆ ಎಂದು ಈಶ್ವರಪ್ಪ ಪುತ್ರ ಕಾಂತೇಶ ಭವಿಷ್ಯ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net