ಮಾನವ ಹಕ್ಕುಗಳು ಉಲ್ಲಂಘನೆಯಾಗದಂತೆ ಕಾರ್ಯನಿರ್ವಹಿಸಿ; ಅಧಿಕಾರಿಗಳಿಗೆ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್ ಸೂಚನೆ

9 HVR 5
Published on

ಹಾವೇರಿ: ಸಾರ್ವಜನಿಕ ಸೇವೆ ನೀಡುವ ಸಂಸ್ಥೆಗಳಲ್ಲಿನ ಅಧಿಕಾರಿಗಳು ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಂತೆ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರೊಂದಿಗೆ ಗೌರವದಿಂದ ಮಾತನಾಡಿ, ಮಾನವೀಯತೆಯಿಂದ ನಡೆದುಕೊಳ್ಳುವುದರಿಂದ ಶೇ.90ರಷ್ಟು ಮಾನವ ಹಕ್ಕುಗಳ ಉಲ್ಲಂಘನೆ ತಡೆಯಬಹುದು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ಅಧಿಕಾರಿಗಳಿಗೆ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಧಿಕಾರಿಗಳು ತಮ್ಮ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಅವರ ಸಮಸ್ಯೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಬೇಕು ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಅವರಿಗೆ ತಲುಪಿಸುವ ಕೆಲಸಮಾಡಬೇಕು ಎಂದು ಸಲಹೆ ನೀಡಿದರು.
ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಮಾತನಾಡಿ, ವ್ಯಕ್ತಿಯ ಹುಟ್ಟಿನಿಂದ ವಾಸದ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗ ಹೀಗೆ ಹಲವು ಮೂಲ ಸೌಕರ್ಯಗಳ ಹಕ್ಕನ್ನು ಹೊಂದುತ್ತಾನೆ. ಮಾನವ ಹಕ್ಕುಗಳ ಸಂರಕ್ಷಣೆ ಸರ್ಕಾರದ ಮೇಲಿದೆ. ಹಾಗಾಗಿ ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.
ಮುಂಬರುವ ದಿನಗಳಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಮಾಡುವಾಗ ಅಟ್ಯಾಚ್ ಬಾತ್‌ರೂಮ್ ಹಾಗೂ ಡ್ರೆಸಿಂಗ್ ರೂಂಗೆ ಕ್ರಿಯಾಯೋಜನೆ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಆಯೋಗದ ಕಾರ್ಯದರ್ಶಿ ಎ.ದಿನೇಶ ಸಂಪತ್‌ರಾಜ್, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಇತರರು ಉಪಸ್ಥಿತರಿದ್ದರು. ಬಾಕ್ಸ್
ನಕಲಿ ಸದಸ್ಯರ ವಿರುದ್ಧ ಎಚ್ಚರ
ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿ ಬೆಂಗಳೂರಿನಲ್ಲಿ ಮಾತ್ರ ಇದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಇರುವುದಿಲ್ಲ. ಯಾವುದೇ ಪ್ರತಿನಿಧಿಗಳನ್ನು ನೇಮಕ ಮಾಡಿರುವುದಿಲ್ಲ. ಹಾಗಾಗಿ, ಆಯೋಗದ ಹೆಸರು ಹೇಳಿಕೊಂಡು ಐಡಿ ಕಾರ್ಡ್ ಹಾಕಿಕೊಂಡು ಕಚೇರಿಗೆ ಬಂದು ಕಿರುಕುಳಕೊಡುವವರ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಕೂಡಲೇ ಆಯೋಗದ ಗಮನಕ್ಕೆ ತರಬೇಕು ಹಾಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಡಾ.ಶ್ಯಾಮ್ ಭಟ್ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net