14 ವರ್ಷದಲ್ಲಿ 62 ಮಕ್ಕಳ ದತ್ತು ಪ್ರಕ್ರಿಯೆ; ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ ಎರಡನೇ ಸ್ಥಾನ; ವಿದೇಶಕ್ಕೂ ಹಾರಿದ್ದಾರೆ ಜಿಲ್ಲೆಯ ಚಿಣ್ಣರು

6 HVR 6
Published on

ಹಾವೇರಿ: ಜಿಲ್ಲಾ ಮಕ್ಕಳ ದತ್ತು ಕೇಂದ್ರದಿಂದ 2009-10ನೇ ಸಾಲಿನಿಂದ 2023-24ರವರೆಗೆ ಸುಮಾರು 14 ವರ್ಷದ ಅವಧಿಯಲ್ಲಿ 36 ಹೆಣ್ಣು ಹಾಗೂ 26 ಗಂಡು ಮಕ್ಕಳು ಸೇರಿ 62 ಮಕ್ಕಳನ್ನು ಕಾನೂನುಬದ್ಧ ಪ್ರಕ್ರಿಯೆ ಮೂಲಕ ದತ್ತು ನೀಡಲಾಗಿದೆ. ಈ ಮೂಲಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
62 ಮಕ್ಕಳ ಪೈಕಿ ಎರಡು ಅನಾಥ ಮಕ್ಕಳು, 24 ಪರಿತ್ಯಕ್ತ ಮಕ್ಕಳು ಹಾಗೂ 36 ಒಪ್ಪಿಸಲ್ಪಟ್ಟ ಮಕ್ಕಳು ಒಳಗೊಂಡಿದ್ದಾರೆ. ರಾಜ್ಯದ ಪಾಲಕರು ಸೇರಿದಂತೆ ದೇಶದ ವಿವಿಧ ರಾಜ್ಯ ಹಾಗೂ ವಿದೇಶಗಳಿಗೂ ಜಿಲ್ಲೆಯಿಂದ ಮಕ್ಕಳನ್ನು ದತ್ತು ನೀಡಲಸಾಗಿದೆ. ಸ್ಪೇನ್ ಹಾಗೂ ದುಬೈಗೆ ತಲಾ ಒಂದು ಹಾಗೂ ಇಟಲಿ ದೇಶಕ್ಕೆ ಇಬ್ಬರು ಮಕ್ಕಳನ್ನು ದತ್ತು ನೀಡಲಾಗಿದೆ ಎಂದರು.
ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತಂತೆ ಅತ್ಯಂತ ಕ್ರಿಯಾಶೀಲವಾಗಿ ಹಾಗೂ ಪರಿಣಾಮಕಾರಿಯಾಗಿ ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ. ಈ ಕುರಿತು ವಿನೂತನ ಹಾಗೂ ಪರಿಣಾಮಕಾರಿಯಾಗಿ ಕಾರ್ಯಕ್ರಮ ಆಯೋಜಿಸಿದ ಜಿಲ್ಲೆಗಳ ಪೈಕಿ ಶಿವಮೊಗ್ಗ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಹಾವೇರಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದರು.
ನವದೆಹಲಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದಿಂದ ಪ್ರತಿ ವರ್ಷ ನವೆಂಬರ್ ಮಾಹೆಯಲ್ಲಿ ಅಂತರಾಷ್ಟ್ರೀಯ ದತ್ತು ಮಾಸ ಕಾರ್ಯಕ್ರಮವನ್ನು ಘೋಷಿಸುತ್ತದೆ. ಸದರಿ ಕಾರ್ಯಕ್ರಮದ ಮಾರ್ಗಸೂಚಿ ಅನುಸಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನವೆಂಬರ್ ತಿಂಗಳು ಪೂರ್ಣ ಅಂಗವಾಡಿ, ಆಶಾ ಕಾರ್ಯಕರ್ತರಿಗೆ, ಆರೋಗ್ಯ ಕೇಂದ್ರ, ತಾಲೂಕಾ ಆಸ್ಪತ್ರೆ, ಶಾಲಾ-ಕಾಲೇಜು ಹಾಗೂ ಮಕ್ಕಳ ಗ್ರಾಮ ಸಭೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಕ್ಕಳ ಮಾರಾಟದ ಅಪರಾಧದ ಗಂಭೀರತೆ ಬಗ್ಗೆ ವಿವರಿಸಲಾಗುತ್ತಿದೆ ಎಂದರು.
ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ನೀಡಿದ ಅಭಿನಂದನಾ ಪ್ರಮಾಣಪತ್ರ ಮತ್ತು ಸ್ಮರಣಿಕೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಹಸ್ತಾಂತರಿಸಿದರು.
ಸಭೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅನ್ನಪೂರ್ಣ ಸಂಗಳದ ಹಾಗೂ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿ ಸಿಬ್ಬಂದಿ, ಶಿಶು ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net