

ಹಾವೇರಿ: ಐತಿಹಾಸಿಕ ಹೆಗ್ಗೇರಿ ಕೆರೆ ಕೋಡಿ ಹರಿದ ಪರಿಣಾಮ ಹಾಗೂ ನಿರಂತರ ಮಳೆಯಿಂದಾಗಿ ನಗರದ ಹೊರ ವಲಯದ ಸ್ವಾತಂತ್ರೃ ಯೋಧ ಮೈಲಾರ ಮಹದೇವಪ್ಪನವರ ವೀರಗಲ್ಲು ಹಾಗೂ ಸಾಂಸ್ಕೃತಿಕ ಭವನಕ್ಕೆ ಜಲದಿಗ್ಬಂಧನವಾಗಿದೆ.
ಭಾನುವಾರ ರಾತ್ರಿ ನಿರಂತರವಾಗಿ ಮಳೆ ಸುರಿದಿದೆ. ನಾಲ್ಕೈದು ದಿನದಿಂದ ಹೆಗ್ಗೇರಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಕೆರೆಯ ನೀರು ಹಳ್ಳದ ಮೂಲಕ ಹರಿದು ಮೈಲಾರ ಮಹದೇವಪ್ಪ ಭವನದ ಪಕ್ಕದಲ್ಲೇ ಹಾದು ಅಗಡಿ ಮಾರ್ಗವಾಗಿ ಕರ್ಜಗಿ ಬಳಿ ವರದಾ ನದಿ ಸೇರುತ್ತದೆ.
ಹೆಗ್ಗೇರಿ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ಹಳ್ಳ ಉಕ್ಕಿ ಹರಿದು ಮೈಲಾರ ಮಹದೇವಪ್ಪನವರ ವೀರಗಲ್ಲು ಹಾಗೂ ಸಾಂಸ್ಕೃತಿಕ ಭವನದ ಸುತ್ತಲೂ ನೀರು ಆವೃತವಾಗಿದೆ.
ಅವೈಜ್ಞಾನಿಕ ಕಾಮಗಾರಿ
ಹಳ್ಳದ ಪಕ್ಕದಲ್ಲೇ ಅವೈಜ್ಞಾನಿಕವಾಗಿ ಸ್ವಾತಂತ್ರೃ ಯೋಧರ ಹೆಸರಲ್ಲಿ ಭವನ ಕಟ್ಟಿದ್ದೇ ಈ ಸಮಸ್ಯೆಗೆ ಕಾರಣವಾಗಿದೆ. ಪ್ರತಿ ಸಲ ಹಳ್ಳ ಬಂದಾಗಲೂ ಭವನ ಸುತ್ತಮುತ್ತ ನೀರು ನಿಲ್ಲುತ್ತದೆ. ಹೀಗಾಗಿ ಇಲ್ಲಿ ಮೈಲಾರ ಮಹದೇವಪ್ಪನವರ ಪುಣ್ಯಸ್ಮರಣೆ, ಇತರ ಕೆಲವೇ ಕಾರ್ಯಕ್ರಮ ಬಿಟ್ಟರೆ ಬೇರಾವ ಕಾರ್ಯಕ್ರಮಗಳೂ ನಡೆಯುವುದಿಲ್ಲ. ಹಾವೇರಿಯ ಅವೈಜ್ಞಾನಿಕ ಕಾಮಗಾರಿಗಳ ಪಟ್ಟಿಗೆ ಇದೂ ಸೇರುತ್ತದೆ ಎಂಬುದು ಸ್ಥಳೀಯರ ಆರೋಪ.