

ಹಾವೇರಿ: ಭಾರತ ಸ್ವಾತಂತ್ರ್ಯ ಹೋರಾಟವೇ ರೋಚಕವಾಗಿತ್ತು. ಇಂದಿನ ಯುವ ಜನಾಂಗ ಸ್ವಾತಂತ್ರ್ಯ ಚಳವಳಿ, ಸ್ವಾತಂತ್ರ್ಯ ಯೋಧರ ತ್ಯಾಗ- ಬಲಿದಾನಗಳನ್ನು ತಿಳಿದುಕೊಳ್ಳಬೇಕು ಹಾಗೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್ ಪಾಟೀಲ ಹೇಳಿದರು.
ನಗರದ ಹುತಾತ್ಮರ ವೀರಸೌಧದಲ್ಲಿ ಮಂಗಳವಾರ ಹಾವೇರಿ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಟಿ.ಎಂ.ಎ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಹುತಾತ್ಮ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರ ಜೀವ ಬಲಿದಾನ ಮಾಡಿದ ಸ್ಮರಣೆಯ 82ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೈಲಾರ ಮಹದೇವಪ್ಪನವರು ಒಬ್ಬ ಧೀಮಂತ ನಾಯಕ. ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವ ಮೂಲಕ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ. ಇಂದಿನ ಯುವ ಜನಾಂಗ ಓದಿನೊಂದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಅನೇಕ ದೇಶಗಳ ಸ್ವಾತಂತ್ರ್ಯ ಹೋರಾಟದಲ್ಲಿ ರಕ್ತಪಾತಗಳು ನಡೆದಿವೆ. ಆದರೆ, ಭಾರತ ದೇಶಕ್ಕೆ ಮಾತ್ರ ಸತ್ಯ ಹಾಗೂ ಅಹಿಂಸೆಯ ತತ್ವದಡಿ ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಾಲಗಂಗಾಧರ ತಿಲಕ್, ಭಗತ್‌ಸಿಂಗ್, ಸುಖದೇವ ಸೇರಿದಂತೆ ಲಕ್ಷಾಂತರ ಸ್ವಾತಂತ್ರೃ ಯೋಧರ ತ್ಯಾಗ ಬಲಿದಾನ ಮರೆಯುವಂತಿಲ್ಲ ಎಂದರು.
ಮೈಲಾರ ಮಹದೇವಪ್ಪ ಅವರು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. ತಮ್ಮ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡರು. ರಾಷ್ಟ್ರಮಟ್ಟದವರೆಗೆ ತನ್ನ ಹೋರಾಟ ಹೆಜ್ಜೆಗುರುತು ಮೂಡಿಸಿದರು. ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ದಂಡಿಯಾತ್ರೆಯಲ್ಲಿ ಭಾಗವಹಿಸಿದ 78 ಜನರ ಪೈಕಿ ಕರ್ನಾಟಕದಿಂದ ಭಾಗವಹಿಸಿದ ಏಕೈಕ ವ್ಯಕ್ತಿ ಮೈಲಾರ ಮಹದೇವಪ್ಪನವರು ಮಾತ್ರ ಎಂಬುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಮಾತನಾಡಿ, ಮೈಲಾರ ಮಹದೇವಪ್ಪನವರ ಸ್ವಾತಂತ್ರ್ಯ ಹೋರಾಟ ಚರಿತ್ರೆ ಎಲ್ಲರಿಗೂ ಮಾದರಿಯಾಗಿದೆ. ಹಾವೇರಿ ವಿಶ್ವವಿದ್ಯಾಲಯದಲ್ಲಿ ಮೈಲಾರ ಮಹದೇವಪ್ಪ, ಸರ್ವಜ್ಞ, ಶಿಶುನಾಳ ಷರೀಫ ಸೇರಿದಂತೆ ವಿವಿಧ ಮಹನೀಯರ ಅಧ್ಯಯನ ಪೀಠ ಸ್ಥಾಪನೆಗೆ ಚಿಂತನೆ ಮಾಡಲಾಗುತ್ತಿದೆ. ಈ ಕುರಿತು ತಮ್ಮ ಸಲಹೆಗಳನ್ನು ವಿಶ್ವವಿದ್ಯಾಲಯಕ್ಕೆ ನೀಡಬಹುದು ಎಂದು ಹೇಳಿದರು.
ರಾಣೆಬೆನ್ನೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಉಪನ್ಯಾಸಕ ಡಾ.ಕಾಂತೇಶರೆಡ್ಡಿ ಗೋಡಿಹಾಳ ಮೈಲಾರ ಮಹದೇವಪ್ಪನವರ ಜೀವನ ಹಾಗೂ ಸ್ವಾತಂತ್ರ್ಯ ಹೋರಾಟದ ಕುರಿತು ಉಪನ್ಯಾಸ ನೀಡಿದರು.
ಯೋಧರ ಜ್ಯೋತಿ ಸ್ವಾಗತ:
ಕೋಗನೂರು ಹಾಗೂ ಹೊಸರಿತ್ತಿ ಗ್ರಾಮಗಳಿಂದ ಆಗಮಿಸಿದ ಹುತಾತ್ಮ ಸ್ವಾತಂತ್ರ್ಯ ಯೋಧರ ಜ್ಯೋತಿಯನ್ನು ವೀರಸೌಧದಲ್ಲಿ ಜಿಲ್ಲಾಧಿಕಾರಿ ಹಾಗೂ ಗಣ್ಯರು ಸ್ವಾಗತಿಸಿಕೊಂಡರು.
ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಟ್ರಸ್ಟ್ ಸದಸ್ಯರಾದ ಎಚ್.ಎಸ್ ಮಹಾದೇವ, ಸತೀಶ ಕುಲಕರ್ಣಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಬಸವರಾಜ ಪೂಜಾರ, ತಹಶೀಲ್ದಾರ್ ಶರಣಮ್ಮ, ಪ್ರಾಂಶುಪಾಲ ಮಂಜುನಾಥ ವಡ್ಡರ, ಇತರರು ಉಪಸ್ಥಿತರಿದ್ದರು.
ಕವನ ವಾಚನ, ಚಿತ್ರ ಪ್ರದರ್ಶನ
ನಿವೃತ್ತ ಶಿಕ್ಷಕ ಸಿ.ಎಸ್ ಮರಳಿಹಳ್ಳಿ ಕವನ ವಾಚಿಸಿದರು. ಅಡಿವೆಪ್ಪ ಕುರಿ, ಹನುಮಂತಪ್ಪ ದಾರವಾಡ, ಮಾರುತಿ ಬೆಟ್ಟಪ್ಪನವರ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಲಾವಣಿ ಹಾಗೂ ಗೀಗೀ ಪದಗಳನ್ನು ಹಾಡಿದರು. ಜಿ.ಜಿ ಮೇಹಂದಳೆ ಸಂಗ್ರಹಿಸಿದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರ ಪ್ರದರ್ಶನ ಜರುಗಿತು.
ಕೋಟ್:
ಕೇಂದ್ರ ಸರ್ಕಾರ ಮೈಲಾರ ಮದೇವಪ್ಪನವರ ಅಂಚೆಚೀಟಿ ಬಿಡುಗಡೆ ಮಾಡಿದೆ. ಹಾವೇರಿ ರೈಲು ನಿಲ್ದಾಣಕ್ಕೆ ಮೈಲಾರ ಮದೇವಪ್ಪನವರ ಹೆಸರು ಇಡಲಾಗಿದೆ. ಗಾಂಧೀಜಿಯವರ ಮಾರ್ಗದಲ್ಲಿ ಹೆಜ್ಜೆ ಹಾಕಿದ ಅವರು ಕೊರಡೂರಿನಲ್ಲಿ ಆಶ್ರಮ ಆರಂಭಿಸಿದರು. ನಮ್ಮ ಸ್ವಚ್ಛಂದ ಬದುಕಿಗೆ ಸ್ವಾತಂತ್ರ್ಯ ಹೋರಾಟಗಾರರು ಕಾರಣೀಕರ್ತರಾಗಿದ್ದಾರೆ. ಹುತಾತ್ಮ ಮೈಲಾರ ಮಹದೇವಪ್ಪನವರು ಜನಿಸಿದ ಈ ನಾಡಿನಲ್ಲಿ ನಾವು ಜನಿಸಿದ್ದು ಹೆಮ್ಮೆ ಎನಿಸುತ್ತದೆ.
- ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ