

ಹಾವೇರಿ: ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ನೆಲದ ಮಹಿಮೆಯನ್ನು ಸಾರಿದ ಶ್ರೇಯಸ್ಸು ಮೈಲಾರ ಮಹದೇವಪ್ಪ ಅವರಿಗೆ ಸಲ್ಲುತ್ತದೆ ಎಂದು ಸಾಮಾಜಿಕ ಹೋರಾಟಗಾರ್ತಿ ಪರಿಮಳಾ ಜೈನ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ವೀರಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಮತ್ತು ಸುಭಾಷ ಚಂದ್ರ ಬೋಸ್ ಅವರಿಂದ ಪ್ರೇರಣೆ ಪಡೆದು ಅಖಂಡ ಧಾರವಾಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬಿದ್ದರು. ಬ್ರಿಟಿಷರಿಗೆ ನಡುಕ ಹುಟ್ಟಿಸಿದ್ದ ಮೈಲಾರ ಮಹದೇವಪ್ಪ ತಮ್ಮ ಸಹಚರರಾದ ವೀರಯ್ಯ ಹಿರೇಮಠ ಮತ್ತು ತಿರಕಪ್ಪ ಮಡಿವಾಳರ ಅವರೊಂದಿಗೆ ಬ್ರಿಟಿಷ್ ಪೊಲೀಸರ ಗುಂಡಿನೇಟಿಗೆ ಹುತಾತ್ಮರಾಗಿ 81 ವರ್ಷ ಸಂದಿವೆ. ಹುತಾತ್ಮರ ಆದರ್ಶಗಳು ನಮಗೆ ಸದಾ ದಾರಿದೀಪ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಮಾತನಾಡಿ, ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಪರಿಚಯಿಸುವ ನಿಟ್ಟಿನಲ್ಲಿ ಹುತಾತ್ಮ ಮೈಲಾರ ಮಹದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಮುನ್ನಡೆಯುತ್ತಿದೆ ಎಂದರು.
ಲೇಖಕಿ ಅನಿತಾ ಮಂಜುನಾಥ ಮಾತನಾಡಿ, ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪ ನಾಡಿನ ಅನರ್ಘ್ಯ ರತ್ನ. ಸಮಾನ ಮನಸ್ಕರ ತಂಡದೊಂದಿಗೆ ಬ್ರಿಟೀಷರ ವಿರುದ್ಧ ಹೋರಾಡಿದ ಕಥೆ ರೋಚಕ. ನೆಲದ ನಾಯಕನಿಗೆ ನುಡಿ ನಮನ ಸಲ್ಲಿಸುವ ಹೊಣೆಗಾರಿಕೆ ನಮ್ಮದು ಎಂದರು.
ಸಾಹಿತಿ ಸತೀಶ ಕುಲಕರ್ಣಿ, ಹುತಾತ್ಮ ಮೈಲಾರ ಮಹದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಸದಸ್ಯ ವಿ.ಎನ್.ತಿಪ್ಪನಗೌಡ್ರ, ಜಗದೀಶ ಮಹಾರಾಜಪೇಟ, ಪರಮೇಶಪ್ಪ ಮೈಲಾರ, ಮಹಾದೇವಪ್ಪ ಮೈಲಾರ, ಚಂದ್ರಶೇಖರ ಶಿಶುವಿನಹಳ್ಳಿ, ಚಂದ್ರಗೌಡ ಗಡೆಪ್ಪಗೌಡ್ರ, ರಾಜೇಂದ್ರ ಹೆಗಡೆ, ಎಸ್.ಎನ್.ತಿಪ್ಪನಗೌಡ್ರ, ಇತರರು ಉಪಸ್ಥಿತರಿದ್ದರು.