ಹಾವೇರಿ: ದೇಶದ ಸ್ವಾತಂತ್ರ್ಯಕ್ಕಾಗಿ ಸಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ವಿರೋಚಿತವಾಗಿ ಹೋರಾಡಿ ಹುತಾತ್ಮರಾದ ಅಮರವೀರ ತ್ರಿವಳಿ ಸಂಗಾತಿಗಳಾದ ಮೈಲಾರ ಮಹದೇವಪ್ಪ, ತಿರಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಅವರ ತ್ಯಾಗ ಬಲಿದಾನದ ಆದರ್ಶಗಳನ್ನು ವಿದ್ಯಾರ್ಥಿಗಳು, ಯುವಜನರು ಮೈಗೂಡಿಸಿಕೊಳ್ಳಬೇಕು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಕರೆ ನೀಡಿದರು.
ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸೋಮವಾರ ಡಿವೈಎಫ್‌ಐ, ಎಸ್‌ಎಫ್‌ಐ ವತಿಯಿಂದ ಆಯೋಜಿಸಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೈಲಾರ ಮಹದೇವಪ್ಪನವರು ಗ್ರಾಮೀಣ ಮಟ್ಟದಲ್ಲಿ ಯುವಜನರನಲ್ಲಿ ಜಾಗೃತಿ ಮೂಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಅವರ ಮಡದಿ ಸಿದ್ದಮ್ಮನವರು ಮಹಿಳೆಯರನ್ನು ಪ್ರೇರೇಪಿಸಿ ಚಳುವಳಿಗೆ ತರುವಲ್ಲಿ ಯಶಸ್ವಿಯಾದರು ಎಂದರು.
ಮಹಾತ್ಮಾ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿ ದಂಡಿಯಾತ್ರೆ ಕೈಗೊಂಡಾಗ ಅದರಲ್ಲಿ ಭಾಗವಹಿಸಿದ್ದ ಮೈಲಾರ ಮಹದೇವಪ್ಪನವರು ಅತಿ ಕಿರಿಯ ಚಳುವಳಿಗಾರರಾಗಿದ್ದರು. ಮಹದೇವಪ್ಪ ಮತ್ತವರ ಸಂಗಾತಿಗಳು ಅಖಂಡ ಧಾರವಾಡ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ಪ್ರಬಲವಾಗಿ ಕಟ್ಟಿದರು. ಮಹದೇವಪ್ಪ ನೇತೃತ್ವದಲ್ಲಿ 1943ರಲ್ಲಿ ಹೊಸರಿತ್ತಿಯ ಕಂದಾಯ ಕಚೇರಿಯ ಮೇಲೆ ದಾಳಿ ಮಾಡಿದಾಗ ಬ್ರಿಟಿಷ್ ಪೊಲೀಸರ ಗುಂಡಿಗೆ ಬಲಿಯಾದರು. ಇವರೊಂದಿಗೆ ಹಿರೇಮಠ ವೀರಯ್ಯ, ಮಡಿವಾಳ ತಿರಕಪ್ಪನವರೂ ಹುತಾತ್ಮರಾದರು ಎಂದರು.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ಹೋರಾಟಗಾರ ರುದ್ರಪ್ಪ ಜಾಬೀನ ಅವರು ಮಹದೇವಪ್ಪನವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು. ಮೈಲಾರ ಮಹದೇವ ಅಮರ ರಹೇ! ತಿರಕಪ್ಪ ಮಡಿವಾಳರ ಅಮರ ರಹೇ! ವೀರಯ್ಯ ಹಿರೇಮಠ ಅಮರ ರಹೇ! ಘೋಷಣೆಗಳು ಮೊಳಗಿದವು. ನಂತರ ವೀರಸೌಧಕ್ಕೆ ತೆರಳಿ ತ್ರಿವಳಿ ಸಂಗಾತಿಗಳ ವೀರ ಸಮಾಧಿಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಡಿವೈಎಫ್‌ಐನ ರೇಣುಕಾ ಪಿ.ಕೆ, ಖಲಂದರ್ ಅಲ್ಲಿಗೌಡ್ರ, ಶಿಕ್ಷಕರಾದ ನಿರಂಜನ ಹಿರೇಮಠ, ಸಿ.ಎಚ್.ಹೊಟ್ಟಿಗೌಡ್ರ, ಇತರರು ಪಾಲ್ಗೊಂಡಿದ್ದರು.