

ಹಾವೇರಿ: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಷಡ್ಯಂತ್ರ ಮಾಡಿ ಅನಾವಶ್ಯಕವಾಗಿ ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯತ್ನಿಸುತ್ತಿವೆ. ಯಾವಾಗಲೂ ಬಿಜೆಪಿ ಹಿಂದಿನ ಬಾಗಿಲಿನಿಂದಲೇ ಬಂದು ಸರ್ಕಾರ ರಚನೆ ಮಾಡಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಈ ಬಾರಿಯೂ ಅಂಥದ್ದೇ ಪ್ರಯತ್ನದಲ್ಲಿದ್ದು, ಅದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಯತ್ನಿಸದೇ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜನಪ್ರೀಯತೆ ಸಹಿಸದೇ ಇಂಥಹ ಕುತಂತ್ರಗಳನ್ನು ಅನುಸರಿಸುತ್ತಿದ್ದಾರೆ. ರಾಜ್ಯದಲ್ಲಿ ಮಳೆ, ಬೆಳೆ ಹಾನಿ ಸಾಕಷ್ಟಿದ್ದು, ಅವುಗಳ ಕುರಿತು ಚರ್ಚಿಸದೇ ತಮ್ಮ ವೈಯಕ್ತಿಕ ಸ್ವಾರ್ಥ ಸಾಧನೆಗೆ ಮುಂದಾಗಿದ್ದಾರೆ. ಮಳೆಯಿಂದ ಬೆಳೆಹಾನಿ ಬಗ್ಗೆ ಯೋಚನೆ ಮಾಡದೇ ಸಿಎಂ ಕೆಳಗಿಳಿಸಲು ಪ್ರಯತ್ನವನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ, ಬಿಎಸ್‌ವೈ ಸಿಎಂ ಆಗಿದ್ದಾಗಲೇ ಜೈಲಿಗೆ ಹೋದವರು. ನಂತರ ಬಂದ ಸರ್ಕಾರ ಶೆ.40ರಷ್ಟು ಕಮಿಷನ್ ಪಡೆದು ಕೆಲಸ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಸ್ವಾರ್ಥ ಸಾಧನೆಗಾಗಿ ಹಲವಾರು ಹಗರಣದಲ್ಲಿ ಬಿಜೆಪಿ ಪಾಲ್ಗೊಂಡಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಬಿಟ್ ಕಾಯಿನ್ ಹಗರಣದಲ್ಲಿ ಸಿಲುಕಿದ್ದರೂ ವಿಚಾರಣೆಗೆ ಏಕೆ ಮುಂದಾಗಲಿಲ್ಲ ಎಂದರು. ಮುಡಾ ಕುರಿತು ಸಿಎಂ ಎಲ್ಲಾ ಸ್ಪಷ್ಟನೆ ಕೊಟ್ಟಿದ್ದರೂ ಮತ್ತೆ ಇದನ್ನೆ ಪ್ರಶ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಸ್ತುತ ಮನೆ ಹಾನಿಗೆ ರಾಜ್ಯ ಸರ್ಕಾರ ನೀಡುತ್ತಿರುವ ರೂ.2.20 ಲಕ್ಷದ ಬದಲು 5 ಲಕ್ಷ ರೂ. ಪರಿಹಾರ ಕೊಡಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು. ಮುಂಬರುವ ಶಿಗ್ಗಾಂವಿ ಉಪಚುನಾವಣೆಗೆ ತಾವೂ ಆಕಾಂಕ್ಷಿಯಾಗಿದ್ದು. ಶಿಗ್ಗಾಂವಿ ಕ್ಷೇತ್ರದಲ್ಲಿ ಮಹಿಳೆಗೆ ಅವಕಾಶ ಮಾಡಿ ಕೊಡುವಂತೆ ಮನವಿ ಮಾಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಜಯಶ್ರೀ ಶಿವಪುರ, ಶಿಗ್ಗಾಂವಿ ಅಧ್ಯಕ್ಷೆ ಅನಸೂಯಾ ಬಳಿಗಾರ, ಹಾವೇರಿ ನಗರ ಘಟಕದ ಅಧ್ಯಕ್ಷೆ ಶಾಂತಾ ಶಿರೂರ, ಗೀತಾ ದುರ್ಗದ, ಇತರರಿದ್ದರು.