ಅನ್ಯಾಯದ ವಿರುದ್ಧ ಹೋರಾಡಿ, ಶೋಷಣೆ ತಡೆಗಟ್ಟಿ; ಪೊಲೀಸ್‌ಠಾಣೆ ತವರು ಮನೆಯಂತೆ, ಧೈರ್ಯದಿಂದ ದೂರು ಕೊಡಿ; ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಸಲಹೆ

5 HVR 4 A
Published on

ಹಾವೇರಿ: ಶಿಕ್ಷಣ ಎಂದರೆ ಕೇವಲ ಪುಸ್ತಕ ಅಲ್ಲ, ಪದವಿ ಅಲ್ಲ. ಅದೊಂದು ಅಪರಿಮಿತವಾದ ಜ್ಞಾನ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಶಿಕ್ಷಣ ಪಡೆಯುವ ಜತೆಗೆ ನಮ್ಮ ಕಣ್ಣೆದುರಿಗೆ ನಡೆಯುವ ಅನ್ಯಾಯ, ಶೋಷಣೆಯ ವಿರುದ್ಧ ಹೋರಾಡಬೇಕು. ನ್ಯಾಯ ಪಡೆಯಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.

ನಗರದ ಕೆಎಲ್‌ಇ ಜಿಎಚ್ ಕಾಲೇಜ್ ಸಭಾಂಗಣದಲ್ಲಿ ಮಂಗಳವಾರ ರಾಜ್ಯ ಮಹಿಳಾ ಆಯೋಗದಿಂದ ಆಯೋಜಿಸಿದ್ದ ಜಿಲ್ಲೆಯ ಪಿಯುಸಿ ಹಾಗೂ ಪದವಿ ಕಾಲೇಜ್‌ಗಳ ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮತ್ತೊಂದು ಜೀವಕ್ಕೆ ಜನ್ಮ ಕೊಡುವ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ. ಹೆಣ್ಣು ಗಟ್ಟಿಗಿತ್ತಿ, ಪ್ರೀತಿ, ತ್ಯಾಗ, ಕರುಣೆ ತುಂಬಿದ ಮಹಾಮಾತೆ. ಆದರೆ, ಆಕೆಯೇ ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗುವುದು ವಿಷಾದನೀಯ ಸಂಗತಿಯಾಗಿದೆ. ಮಹಿಳೆಯನ್ನು ಹುಟ್ಟಿನಿಂದ ಕೊನೆಯವರೆಗೆ ವ್ಯವಸ್ಥೆಯ ಕಟ್ಟುಪಾಡಿನಲ್ಲಿ ಕಟ್ಟಿಹಾಕಲಾಗಿದೆ. ಬಸವಣ್ಣ, ಅಂಬೇಡ್ಕರ್, ಸೇರಿದಂತೆ ಅನೇಕರು ಮಹಿಳಾ ಸಮಾನತೆಗೆ ಹೋರಾಡಿದರು. ಮಹಿಳೆಯರು ಸಮಾಜದಲ್ಲಿ ಧ್ವನಿ ಎತ್ತಿದರೆ ಮಾತ್ರ ಬದುಕಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವೆಂಟಗೋಡಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆ ಮಾತ್ರ ಗಮನ ಕೊಡಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಪ್ರೀತಿ, ಪ್ರೇಮ ಪ್ರಕರಣಗಳಲ್ಲಿ ಬಿದ್ದು ಜೀವನ ಹಾಳು ಮಾಡಿಕೊಳ್ಳದೇ, ತಂದೆ-ತಾಯಿ ನಂಬಿಕೆ ಉಳಿಸಿಕೊಳ್ಳಬೇಕು. ಶೋಷಣೆ, ದೌರ್ಜನ್ಯ ಆದಾಗ ಪೊಲೀಸ್ ಠಾಣೆಗೆ ಬರಲು ಯಾವುದೇ ಅಳುಕು ಬೇಡ. ಮಹಿಳೆಯರ ಸಮಸ್ಯೆಗೆ ಸದಾ ಸ್ಪಂದಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಡಿಡಿಪಿಯು ಅಶೋಕ ಶಾಸ್ತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ರೇವತಿ ಹೊಸಮಠ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಭಾರತೀ ಎಚ್., ತಹಸೀಲ್ದಾರ್ ಶರಣಮ್ಮ, ಪ್ರಾಂಶುಪಾಲ ಪ್ರೊ.ಎಂ.ಎಂ.ಹೊಳ್ಳಿಯವರ, ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈಲಾ ಕುರಹಟ್ಟಿ ಸ್ವಾಗತಿಸಿದರು. ಸುಮಂಗಲಾ ನಿರೂಪಿಸಿದರು.

ಲವ್ ಮ್ಯಾರೇಜ್ ಓಕೆ. ಆದರೆ..

ಜಿಪಂ ಸಿಇಒ ರುಚಿ ಬಿಂದಲ್ ಅವರದ್ದು ಲವ್ ಮ್ಯಾರೇಜ್ ಅಲ್ಲವೇ ಎಂದು ಡಾ.ನಾಗಲಕ್ಷ್ಮೀ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಇಒ, ಹೌದು ಆದರೆ, ವಿದ್ಯಾಭ್ಯಾಸ ಮುಗಿದು ಅಧಿಕಾರಿ ಆದ ಬಳಿಕ ಲವ್‌ಮಾಡಿ ಮದುವೆ ಆಗಿದ್ದೇನೆ ಎಂದರು. ನಂದೂ ಕೂಡ ಲವ್ ಮ್ಯಾರೇಜ್. ನಾನೂ ಎಂಬಿಬಿಎಸ್ ಮುಗಿದ ನಂತರ, ಕೆಲಸ ಸಿಕ್ಕ ಮೇಲೆ ಲವ್ ಮಾಡಿ ಮದುವೆ ಆಗಿದ್ದೇನೆ. ಚೆನ್ನಾಗಿ ಓದಿ, ಸ್ವಂತ ದುಡಿಮೆಯ ಮೇಲೆ ಬದುಕಿ. ನಂತರ ಲವ್, ಮದುವೆ ಎಲ್ಲ ಸುಲಭವಾಗುತ್ತದೆ ಎಂದು ಡಾ.ನಾಗಲಕ್ಷ್ಮೀ ಸಲಹೆ ನೀಡಿದರು.

ನಾನು ಉತ್ತರ ಕರ್ನಾಟಕದ ಸೊಸೆ

ನಾನು ಬೆಂಗಳೂರಿನ ಮಗಳು ಆದರೆ, ಉತ್ತರ ಕರ್ನಾಟಕದ ಕಲಬುರಗಿಯ ಸೊಸೆ. ನನ್ನ ಪತಿಯ ಊರು ಕಲಬುರಗಿಯಲ್ಲಿ 12 ವರ್ಷ ಜೀವನ ನಡೆಸಿದ್ದೇನೆ. ಇಲ್ಲಿನ ಜೀವನ ನನ್ನ ಬದುಕಿನಲ್ಲಿ ಅನೇಕ ಬದಲಾವಣೆಗಳನ್ನು ತಂದುಕೊಟ್ಟಿದೆ. ಇಲ್ಲಿನ ಜನ ಬಹಳ ಒಳ್ಳೆಯವರು. ಜೀವನದ ಹೋರಾಟ, ಸಂಘರ್ಷ, ಸರಳತೆಯೇ ಜೀವನ ಎಂಬುದು ಅರ್ಥವಾಯಿತು ಎಂದು ಡಾ.ನಾಗಲಕ್ಷ್ಮೀ ಉ.ಕ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net