ವಿಧವೆಯರಿಗೆ ಮನೆ, ನಿವೇಶನ ಕಲ್ಪಿಸಿ; ಡಿಸಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಸೂಚನೆ

7 HVR 5 D
Published on

ಹಾವೇರಿ: ಜಿಲ್ಲೆಯಲ್ಲಿ ವಿಧವೆಯರು ಹೆಚ್ಚಾಗಿದ್ದು, ವಸತಿ ಸೌಲಭ್ಯ ಕೇಳಿಕೊಂಡು ನಮ್ಮ ಬಳಿ ಮನವಿ ಸಲ್ಲಿಸಿದ್ದಾರೆ. ವಿಧವೆಯರು, ಆ್ಯಸಿಡ್ ಸಂತ್ರಸ್ತೆಯರಿಗೆ ವಿಶೇಷ ಪ್ರಕರಣ ಎಂದು ನಿವೇಶನ, ಮನೆ ಕಲ್ಪಿಸುವಂತೆ, ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಧವೆಯರ ಸಂಖ್ಯೆ ಪಡೆದು, ನಿವೇಶನ ಹಂಚಿಕೆಗೆ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದೇನೆ. ಈ ಕುರಿತು ನಾನೂ ಕೂಡ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.

ಜಿಪಂ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧೆಡೆ ಮೂರು ದಿನ ಪ್ರವಾಸ ಮಾಡಿದ್ದು, ಮಹಿಳೆಯರು, ಮಕ್ಕಳಿಂದ ಅನೇಕ ದೂರುಗಳು ಬಂದಿವೆ. ಕೆಲ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಬಸ್ ಸೌಕರ್ಯಗಳಿಲ್ಲ. ಈ ಕುರಿತು ಕ್ರಮ ವಹಿಸಲು ಡಿಸಿ, ಜಿಪಂ ಸಿಇಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಹಾನಗಲ್ಲ ಪಟ್ಟಣ ಬಂದ್ ಹಾಗೂ ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣದ ಕುರಿತು ವಿವರವಾಗಿ ಪರಿಶೀಲಿಸಿ, ಅಗತ್ಯ ಸೂಚನೆ ನೀಡಲಾಗುವುದು ಎಂದರು.

ಬ್ಯಾಗವಾದಿ ಕೇಸ್ ವರದಿ ನೀಡಿ

ಹಾನಗಲ್ಲ ತಾಲೂಕು ಬ್ಯಾಗವಾದಿ ಲಕ್ಕವ್ವ ಬೆಟಗೇರಿ ಪ್ರಕರಣದ ಕುರಿತು ಸಮಗ್ರ ವರದಿ ನೀಡುವಂತೆ ಎಸ್‌ಪಿ ಅವರಿಗೆ ಸೂಚಿಸಿದ್ದೇನೆ. ಎಸ್‌ಸಿ, ಎಸ್‌ಟಿ ಕಾಯ್ದೆ ಅಡಿ ಪ್ರಕರಣ ದಾಖಲಾದ ಹಿನ್ನೆಲೆ ಡಿಸಿಆರ್‌ಇಗೆ ವರ್ಗಾವಣೆ ಮಾಡಿದ್ದು, ಅವರೇ ಪ್ರಕರಣದ ತನಿಖೆ ನಡೆಸುವರು ಎಂದು ಎಸ್‌ಪಿ ತಿಳಿಸಿದ್ದಾರೆ. ಈ ಕುರಿತು ಮುಲಾಜಿಲ್ಲದೇ ಕ್ರಮ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡು ವರದಿ ಕೊಡಿ ಎಂದು ಸೂಚಿಸಿದ್ದೇನೆ ಎಂದು ಡಾ.ನಾಗಲಕ್ಷ್ಮೀ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net