ಅತ್ಯಾಚಾರ, ಪೋಕ್ಸೊ, ಬಾಲ್ಯ ವಿವಾಹ ತಡೆಗಟ್ಟಿ; ತಾಲೂಕು ಆಸ್ಪತ್ರೆಗಳಲ್ಲಿ ಬಾಣಂತಿ, ಗರ್ಭಿಣಿಯರಿಗೆ ಊಟ ಕೊಡಿ; ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಸೂಚನೆ

7 HVR 5 C
Published on

ಹಾವೇರಿ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅತ್ಯಾಚಾರ, ಬಾಲ್ಯವಿವಾಹ ಹಾಗೂ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಯಾಕೆ ಹೀಗಾಗುತ್ತಿದೆ. ಇಂತಹ ಪ್ರಕರಣಗಳ ತಡೆಗೆ ಎಲ್ಲ ಕಾಲೇಜ್‌ಗಳಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಮಹಿಳಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಡಿದರು. ಜಿಲ್ಲೆಯಲ್ಲಿ ಬಾಲಗರ್ಭಿಣಿಯರು ಹಾಗೂ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿರುವುದು ವಿಷಾಧದ ಸಂಗತಿಯಾಗಿದೆ. ಹಾಗಾಗಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಂತಹ ಪ್ರಕರಣಗಳ ತಡೆಗೆ ಸೂಕ್ತ ಕ್ರಮವಹಿಸಬೇಕು. ಅಗತ್ಯವಾಗಿ ಜನಜಾಗೃತಿ ಮೂಡಿಸಿ. ಬೃಹತ್ ಮ್ಯಾರಾಥಾನ್ ಆಯೋಜಿಸಿ, ನಾನೂ ಭಾಗವಹಿಸುತ್ತೇನೆ ಎಂದರು.

ಪೊಲೀಸ್ ಇಲಾಖೆ ಮೇಲೆ ಸಾರ್ವಜನಿಕರಿಗೆ ನಂಬಿಕೆ ಬರಬೇಕು. ಹಾಗಾಗಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಪೊಲೀಸ್ ಠಾಣೆಗೆ ಬರುವವರೊಂದಿಗೆ ಸೌರ್ಜನ್ಯದಿಂದ ನಡೆದುಕೊಳ್ಳಬೇಕು ಹಾಗೂ ಆತ್ಮಸೈರ್ಯ ತುಂಬಬೇಕು. ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸ ಮೂಡಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸಲಹೆ ನೀಡಿದರು.

ಹಿರೇಕೆರೂರ ತಾಲೂಕು ಆಸ್ಪತ್ರೆಯಲ್ಲಿ ಬಾಣಂತಿ ಹಾಗೂ ಗರ್ಭಿಣಿಯರಿಗೆ ಊಟ ನೀಡುತ್ತಿಲ್ಲ. ಐಸಿಯು ವಾರ್ಡ್‌ಗೆ ಬೀಗ ಹಾಕಲಾಗಿದೆ. ಕೂಡಲೇ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಬಾಣಂತಿ ಹಾಗೂ ಗರ್ಭಿಣಿಯರಿಗೆ ಊಟ, ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆಗೆ ಕ್ರಮವಹಿಸಬೇಕು. ನಾಲ್ಕು ವೈದ್ಯರು ಮಾತ್ರವಿದ್ದು, ಖಾಲಿ ವೈದ್ಯರ ಹುದ್ದೆ ನೇಮಕಕ್ಕೆ ಹಾಗೂ ಐಸಿಯು ವಾರ್ಡ್ ಆರಂಭಿಸಬೇಕು ಎಂದು ಡಿಎಚ್‌ಒಗೆ ನಿರ್ದೇಶಿಸಿದರು.

ಗೋಟಗೋಡಿ ಬಿಸಿಎಂ ವಸತಿ ನಿಲಯ, ಹಾವೇರಿ ನಗರದ ಬಾಲಕಿಯರ ಸರ್ಕಾರಿ ಪದವಿ ಕಾಲೇಜ್, ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಸೂಕ್ತ ಬಸ್ ಸೌಕರ್ಯ ಒದಗಿಸಿ. ಏಕ ಪೋಷಕ ಮಕ್ಕಳಿಗೆ ಪ್ರಾಯೋಜಕತ್ವ ಯೋಜನೆಯಡಿ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಗಾಜಿಗೌಡ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರೇವತಿ ಹೊಸಮಠ, ಇತರರು ಉಪಸ್ಥಿತರಿದ್ದರು.

ಅಂಗನವಾಡಿ ಆರಂಭಿಸಿ:

ಹಾವೇರಿಯ ನಾಗೇಂದ್ರನಮಟ್ಟಿ ಹಾಗೂ ಹಂಸಭಾವಿಯಲ್ಲಿ ಅಲೆಮಾರಿ ಸಮುದಾಯ ವಾಸಿಸುವ ಪ್ರದೇಶದಲ್ಲಿ ಅವರ ಮಕ್ಕಳು ಅಂಗನವಾಡಿಗಳಿಗೆ ದೂರದ ಸ್ಥಳಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಹಾಗಾಗಿ, ಆ ಪ್ರದೇಶಗಳಲ್ಲಿ ಕೂಡಲೇ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ ಎಂದು ಸೂಚಿಸಿದರು.

ಸಮಸ್ಯೆಗಳ ಸುರಿಮಳೆ

ವಸತಿ ಸಮಸ್ಯೆ, ಹೊರಗುತ್ತಿಗೆ ಸಿಬ್ಬಂದಿಯ ವೇತನದಲ್ಲಿ ವ್ಯತ್ಯಾಸ, ಪೈನಾನ್ಸ್ ಕಿರುಕುಳ, ಕಾರ್ಮಿಕರಿಗೆ ಸೌಲಭ್ಯ ಕೊರತೆ, ಪಡಿತರ ಚೀಟಿ, ಮಾಸಾಶನ, ಬಸ್ ನಿಲುಗಡೆ, ಹೆಚ್ಚುವರಿ ಬಸ್ ಸೌಲಭ್ಯ, ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಪರಿಹಾರ, ಆಸ್ತಿಗಾಗಿ ನಕಲು ಸಹಿ, ಹಕ್ಕು ಪತ್ರ ಸೇರಿದಂತೆ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿನಿಯರು, ಮಹಿಳೆಯರು, ವೃದ್ಧರು ಹಾಗೂ ವಿವಿಧ ಸಂಘಟನೆಗಳು ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು. ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಆಂತರಿಕ ದೂರು ಸಮಿತಿ ರಚಿಸಿ

ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಾಲಾ-ಕಾಲೇಜ್‌ಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಆಂತರಿಕ ದೂರು ಸಮಿತಿ ರಚಿಸಿ, ಜತೆಗೆ ಸೂಚನಾ ಫಲಕದಲ್ಲಿ ಸಹಾಯವಾಣಿ ಸಂಖ್ಯೆ ಪ್ರದರ್ಶಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಎಲ್ಲರ ಸಹಕಾರ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net