ಸಹಕಾರಿ ಸಂಘಗಳು ಸಹಕಾರದಿಂದ ಬೆಳೆಯಲು ಸಾಧ್ಯ; ರಂಭಾಪುರಿ ಶ್ರೀ

22 HVR 3
Published on

ಹಾವೇರಿ: ಸುಖ ಶಾಂತಿ ಬದುಕಿಗೆ ಸಂಪನ್ಮೂಲ ಬೇಕೇ ಬೇಕು. ಬಾಲ್ಯದಲ್ಲಿ ವಿದ್ಯೆ, ತಾರುಣ್ಯದಲ್ಲಿ ಸಂಪತ್ತು ಗಳಿಸಿಕೊಂಡು ಬಾಳಬೇಕಾಗುತ್ತದೆ. ಪರಸ್ಪರ ನಂಬಿಕೆ ಮತ್ತು ಸಹಕಾರದಿಂದ ಸಹಕಾರಿ ಸಂಘಗಳು ಬೆಳೆದು ಬರಲು ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ನಗರದ ಮಾಹೇಶ್ವರ ಕ್ರೆಡಿಟ್ ಕೋ-ಆಫ್ ಸೊಸೈಟಿಯ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮಾನವ ಜೀವನದಲ್ಲಿ ಧೈರ್ಯ ಮತ್ತು ಚಲನಶೀಲತೆ ಮುಖ್ಯ. ಹಾಗೆಯೇ ಬದುಕಿನ ಬಗೆಗೆ ಸಕಾರಾತ್ಮಕವಾಗಿ ಚಿಂತಿಸುವುದು ಮುಖ್ಯ. ಒಳ್ಳೆಯ ಹೆಸರು ಹಣಕ್ಕಿಂತಲೂ ಹೆಚ್ಚು. ಉನ್ನತಿಯ ದಾರಿಯಲ್ಲಿ ಸಭ್ಯತೆಯ ಅವಶ್ಯಕತೆಯಿದೆ. ವಿದ್ಯೆಗೆ ಸಮನಾದ ಕಣ್ಣಿಲ್ಲ. ಸತ್ಯಕ್ಕೆ ಸಮಾನವಾದ ತಪಸ್ಸಿಲ್ಲ. ಸತ್ಯ ಸಾಧಿಸಲು ಹೊರಟವನಿಗೆ ಸ್ತುತಿ ನಿಂದೆಗಳು ಸದಾ ಇದ್ದೇ ಇರುತ್ತವೆ. ಬದುಕೊಂದು ಪುಸ್ತಕ. ಪ್ರತಿ ಪುಟದಿಂದ ಏನನ್ನಾದರೂ ಕಲಿಯಬಹುದು. ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ನಿರ್ಮಾಣಕ್ಕಾಗಿ ಮಾಹೇಶ್ವರ ಸೊಸಾಯಿಟಿ ತನ್ನ ಲಾಭಾಂಶದಲ್ಲಿ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಹರಸೂರು ಬಣ್ಣದಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಧ್ಯಯನ ನಿರತ ವಿದ್ಯಾರ್ಥಿಗಳಿಗೆ ಶಿಕ್ಷಣದ ಅರಿವು ಮತ್ತು ಸಂಸ್ಕಾರ ಆಚರಣೆ ಇರಬೇಕಾಗುತ್ತದೆ ಎಂದರು.
ಇದಕ್ಕೂ ಮುನ್ನ ಸೊಸೈಟಿಯ 25ನೇ ವರ್ಷದ ವಾರ್ಷಿಕ ವರದಿ ಹಾಗೂ ಅಢಾವೆಯ ಬಗೆಗೆ ಚಿಂತನಾ ಸಮಾರಂಭ ಜರುಗಿತು. ಆಯ್ಕೆಗೊಂಡ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ಹಾಗೂ ಪ್ರಮಾಣ ಪತ್ರ ಕೊಟ್ಟು ಶ್ರೀ ರಂಭಾಪುರಿ ಜಗದ್ಗುರುಗಳು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ಸಿ.ಮಳಿಮಠ, ನಿರ್ದೇಶಕರಾದ ಎಸ್.ಜಿ.ಪಾಟೀಲ, ಎಸ್.ಸಿ.ನಡುವಿನಮಠ, ಎಸ್.ಎಂ.ಹಿರೇಮಠ, ವಿ.ಬಿ.ಹಿರೇಮಠ, ಎನ್.ಸಿ.ಮರಡೂರ, ಎಸ್.ಎಸ್.ಕೆ.ಹಿರೇಮಠ, ವಿ.ಜಿ.ಹಿರೇಮಠ, ಎಸ್.ಎಸ್.ಹೂಲಿಕಂತಿಮಠ, ಆರ್.ಆರ್.ನರಾಟೆ, ಎನ್.ಪಿ.ಓಲೇಕಾರ, ಎಸ್.ಡಿ.ಬೆಳಗಲಿ, ವ್ಯವಸ್ಥಾಪಕ ಚಂದ್ರಶೇಖರ ಮಠದ, ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಸೊಸೈಟಿ ಅಧ್ಯಕ್ಷ ಎಸ್.ಎನ್.ಹಿರೇಮಠ ಸ್ವಾಗತಿಸಿದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net