ಹಾವೇರಿ: ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಕಲಿಸಿದಲ್ಲಿ ಅವರು ವಿದ್ಯಾವಂತರಾಗಿ ಸಮಾಜದಲ್ಲಿ ಸಂಸ್ಕಾರವಂಥ ಪ್ರಜೆಯಾಗಿ ಬೆಳೆಯುತ್ತಾರೆ ಎಂದು ಶ್ರೀ 1008 ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳವರು ಪಾಲಕರಿಗೆ ಕಿವಿಮಾತು ಹೇಳಿದರು.
ನಗರದಲ್ಲಿ ಶುಕ್ರವಾರ ಶ್ರೀ ಮಾಹೇಶ್ವರ ಕ್ರೆಡಿಟ್ ಕೋ ಆಪ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ 26ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಮಾನವನ ಜೀವನದಲ್ಲಿ ಧ್ಯೇಯ ಛಲ ಇದ್ದರೆ ಅದಕ್ಕೆ ಸಂಸ್ಕಾರವೆಂಬ ಶಕ್ತಿ ನೀಡಿದಾಗ ಅದ್ಭುತ ಸಾಧನೆಗಳು ಸಾಧ್ಯವಾಗುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಸಂಘದ ಹಿರಿಯ ನಿರ್ದೇಶಕ ಸಂಗನಗೌಡ ಪಾಟೀಲ, ಹಿರಿಯ ಸದಸ್ಯ ಮುರುಗಯ್ಯ ಸಂಪಿಗೆಮಠ, ಶಾಂತಮ್ಮ ಕುರುಬಗೊಂಡ ಶೆಟ್ರ, ಶಿವಲಿಂಗಯ್ಯ ಬುರುಡಿಕಟ್ಟಿಮಠ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರಿಗೆ ಶೇ.15ರಷ್ಟು ಲಾಭಾಂಶ ಘೋಷಿಸಲಾಯಿತು.
ಸಭೆಯಲ್ಲಿ ಗೌರಿಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಹರಸೂರ ಬಣ್ಣದ ಮಠದ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ನಾಗರಾಜ ನಡುವಿನಮಠ, ಶೋಭಾ ಜಾಗಟಗೇರಿ, ಇತರರಿದ್ದರು.