ಹಾವೇರಿ: ಅನಧಿಕೃತವಾಗಿ ಮಕ್ಕಳನ್ನು ದತ್ತು ಪಡೆಯುವುದು ಹಾಗೂ ಸಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, 2024ರ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಇಂತಹ ಮೂರು ಪ್ರಕರಣಗಳು ಪತ್ತೆಯಾಗಿವೆ. ಮಕ್ಕಳನ್ನು ಅನಧಿಕೃತವಾಗಿ ದತ್ತು ಪಡೆಯುವುದು ಹಾಗೂ ಸಾಕುವುದು ಕಾನೂನು ಬಾಹಿರವಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್.ಎಚ್.ಮಜೀದ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪ್ರೀತಿ, ಪ್ರೇಮಕ್ಕೆ ಬಲಿಯಾಗಿ ಅಪ್ರಾಪ್ತ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು, ಮೋಸ ಹೋಗಿ, ಗರ್ಭಿಣಿಯಾಗಿ ಹೆರಿಗೆಯಾದಾಗ ತಮ್ಮ ಮರ್ಯಾದೆಗೆ ಧಕ್ಕೆಯಾಗುತ್ತದೆ ಎಂದು ಭಾವಿಸಿ, ಹೆತ್ತ ಮಕ್ಕಳನ್ನು ಖಾಸಗಿ ಆಸ್ಪತ್ರೆಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಅಂತಹ ಮಕ್ಕಳನ್ನು ಆಸೆ, ಆಮಿಷಗಳಿಗೆ ಬಲಿಯಾಗಿ ಮಕ್ಕಳಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಕೊಡುವುದು ಬಾಲನ್ಯಾಯ ಕಾಯ್ದೆ-2015 ತಿದ್ದುಪಡಿ 2021ರ ಪ್ರಕಾರ ಅಪರಾಧವಾಗುತ್ತದೆ.
ಇಂತಹ ಪ್ರಕರಣ ಕಂಡು ಬಂದ ತಕ್ಷಣ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ನಸಿರ್ಂಗ್ ಹೋಂಗಳ ವೈದ್ಯಾಧಿಕಾರಿಗಳು, ಸಿಬ್ಬಂದಿ, ನರ್ಸ್‌ಗಳು ಸಂಬಂಧಪಟ್ಟ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಮಾಹಿತಿ ನೀಡದೆ ಇದ್ದರೆ ಬಾಲ ನ್ಯಾಯ ಕಾಯ್ದೆ-2015 ತಿದ್ದುಪಡಿ 2021ರ ಸೆಕ್ಷನ್ 34ರ ಪ್ರಕಾರ ಅಪರಾಧವಾಗುತ್ತದೆ. ಬಾಲ ನ್ಯಾಯಕಾಯ್ದೆ 2015ರ ಪ್ರಕಾರ ಪಾಲನಾ ಪೋಷಣೆ ಅವಶ್ಯ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವುದು ಅವಶ್ಯವಾಗಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು, ಪಾಲಕರು, ಸರ್ಕಾರಿ, ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ, ನಸಿರ್ಂಗ್ ಹೋಂಗಳ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಮಕ್ಕಳ ಬಗ್ಗೆ ಕಾಳಜಿಯುಳ್ಳ ಯಾರಾದರೂ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ (08375-249005), ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (08375-233062) ಹಾಗೂ ಮಕ್ಕಳ ಕಲ್ಯಾಣ ಸಮಿತಿ ಮತ್ತು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿರುವ ಉಚಿತ ತುರ್ತು ಸೇವೆ ಮಕ್ಕಳ ಸಹಾಯವಾಣಿ 1098 ಅಥವಾ 112 ಸಂಪರ್ಕಿಸಲು ಕೋರಲಾಗಿದೆ.
ಅನಾಥ ಮಕ್ಕಳು, ಏಕಪೋಷಕ ಮಕ್ಕಳು, ನಿರ್ಗತಿಕ ಮಕ್ಕಳು, ಕುಟುಂಬ ಕಲಹದಿಂದ ತಮ್ಮ ಹಕ್ಕುಗಳಿಂದ ವಂಚಿತರಾದ ಮಕ್ಕಳನ್ನು ರಕ್ಷಿಸಿ, ಅವರನ್ನು ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಸರ್ಕಾರಿ ಬಾಲಮಂದಿರ ಹಾಗೂ ಮಕ್ಕಳ ಪಾಲನ ಸಂಸ್ಥೆಗಳಿಗೆ ದಾಖಲಿಸಿ ಅವರ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಮಜೀದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.