

ರಾಣೆಬೆನ್ನೂರ: ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿಷಯ ತಿಳಿದ ಸ್ನೇಹಿತ ಆತನಿಗೆ ಬಿಯರ್ ಕುಡಿಸಿ, ಚಾಕುವಿನಿಂದ ಚುಚ್ಚಿ ಕೊಲೆಗೈದ ಘಟನೆ ನಗರದ ಹೊರವಲಯದ ಜಾನುವಾರು ಮಾರುಕಟ್ಟೆ ಬಳಿಯ ಹೊಸ ಬೈಪಾಸ್ ರಸ್ತೆಯಲ್ಲಿ ಎರಡು ದಿನದ ಹಿಂದೆ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ.
ತಾಲೂಕಿನ ಮಾಗೋಡ ಗ್ರಾಮದ ಸಲೀಂ ದಾದಾಪೀರ ಓಲೆಕಾರ (29) ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತ ಹೈದರ್‌ಅಲಿ ಚಮನಸಾಬ ಹಲಗೇರಿ ಕೊಲೆ ಮಾಡಿರುವ ಆರೋಪಿ. ಈತನಿಗೆ ಮತ್ತೊಬ್ಬ ಆರೋಪಿ ಕಾರ್ತಿಕ ದುಂಡಣ್ಣನವರ ಸಹಕಾರ ನೀಡಿದ್ದಾನೆ.
ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ದಿನವಾದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮೃತನ ತಾಯಿಗೆ ಸಲೀಂ ಶವ ನೋಡಿದವರು ಹಾಗೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ಪ್ರಕರಣ ?
ಗೌಂಡಿ ಕೆಲಸ ಮಾಡಿಕೊಂಡಿದ್ದ ಸಲೀಂ ತನ್ನ ಸ್ನೇಹಿತ ಹೈದರ್ ಅಲಿ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಅಲ್ಲದೇ ‘ನಿನಗೆ ನಾನೇ ಮಗು ಮಾಡಿಕೊಡುವೆ’ ಎಂದು ಹೇಳಿದ್ದನಂತೆ. ಈ ವಿಷಯ ಹೈದರ್ ಅಲಿಗೆ ಗೊತ್ತಾಗಿತ್ತು. ಹಾಗಾಗಿ, ಸಲೀಂನನ್ನು ಕೊಲ್ಲಲು ಹೊಂಚು ಹಾಕಿದ್ದ. ಫೆ.22ರಂದು ತಡರಾತ್ರಿ ಹೈದರ್ ಅಲಿ ತನ್ನ ಮತ್ತೊಬ್ಬ ಸ್ನೇಹಿತ ಕಾರ್ತಿಕನೊಂದಿಗೆ ಸಲೀಂನನ್ನು ಕರೆದುಕೊಂಡು ಬಾರ್‌ನಲ್ಲಿ ಮದ್ಯ ಸೇವಿಸಿದ್ದರು. ನಂತರ ಜಾನುವಾರು ಮಾರುಕಟ್ಟೆಯ ಬಳಿ ಹೊಸದಾಗಿ ನಿರ್ಮಾಣವಾಗುತ್ತಿರುವ ಬೈಪಾಸ್ ರಸ್ತೆಗೆ ತೆರಳಿ ಅಲ್ಲಿ ಸಲೀಂಗೆ ಹೈದರ್ ಬಿಯರ್ ಕುಡಿಸಿದ್ದಾರೆ. ಬಿಯರ್ ಸೇವಿಸುವಾಗ ಏಕಾಏಕಿ ಚಾಕುವಿನಿಂದ ಹೊಟ್ಟೆ ಹಾಗೂ ಬೆನ್ನಿಗೆ ನಾಲ್ಕು ಬಾರಿ ಚುಚ್ಚಿ, ಕಲ್ಲಿನಿಂದ ಹೊಡೆದು ಹತ್ಯೆಗೈದಿದ್ದಾರೆ.
ಪೊಲೀಸ್ ಠಾಣೆಗೆ ಶರಣು :
ಕೊಲೆಯ ಪ್ರಮುಖ ಆರೋಪಿ ಹೈದರ್‌ಅಲಿ ಚಮನಸಾಬ ಹಲಗೇರಿ ತಾನೇ ಖುದ್ದಾಗಿ ಬಂದು ಪೊಲೀಸರಿಗೆ ಶರಣಾಗಿದ್ದು, ಆತನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಮತ್ತೋರ್ವ ಆರೋಪಿ ಕಾರ್ತಿಕ ತಲೆಮರೆಸಿಕೊಂಡಿದ್ದಾನೆ.