

ಹಾವೇರಿ: ಮಾದಿಗ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಸೇರಿ ಎಲ್ಲ ರಂಗದಲ್ಲಿ ಅಭಿವೃದ್ಧಿಯಾಗಬೇಕು. ಜನರು ಸರ್ಕಾರಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸದಾಶಿವ ಆಯೋಗ ಜಾರಿಗೊಳಿಸುವ ನಿಟ್ಟಿನಲ್ಲಿ ಸಮುದಾಯ ಜನತೆ ಜಾಗೃತಿ ವಹಿಸುವುದು ಅವಶ್ಯಕವಾಗಿದೆ ಎಂದು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸದಾಶಿವ ಆಯೋಗದ ಜಾರಿಗಾಗಿ ಹಾಗೂ ಮಾದಿಗ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ವಿವಿಧ ದಲಿತ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ‘ಮಾದಿಗರ ಆತ್ಮಗೌರವ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
ಸದಾಶಿವ ಆಯೋಗ ಜಾರಿಗೆ ಆಗಬೇಕು ಎಂಬ ನಮ್ಮ ಕೂಗಿಗೆ ಹಿಂದಿನ ಬಿಜೆಪಿ ಸರ್ಕಾರ ಪುಷ್ಠಿ ನೀಡಿದೆ. ಇದರಿಂದ ಸಮುದಾಯದ ಹೋರಾಟಕ್ಕೆ ಬಲ ಬಂದಂತಾಗಿದೆ. ಸಮುದಾಯದ ಹಿತಕ್ಕಾಗಿ ನಾವೆಲ್ಲರೂ ಬದ್ಧರಾಗೋಣ. ಹೋರಾಟ ನಿರಂತರವಾಗಿರಲಿ ಎಂದು ಕರೆ ನೀಡಿದರು.
ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ಸರ್ಕಾರಗಳ ಸೌಲಭ್ಯಗಳನ್ನು ಪಡೆಯಲು ಜಾಗೃತಿ ವಹಿಸಬೇಕು. ಸದಾಶಿವ ಆಯೋಗದ ಜಾರಿಗಾಗಿ ರಾಜ್ಯದ ಎಲ್ಲ ಭಾಗಗಳಲ್ಲಿ ಸಮಾವೇಶ ಆಯೋಜನೆ ಮಾಡಲಾಗುತ್ತಿದೆ. ಒಗ್ಗಟ್ಟಿನ ಹೋರಾಟ ಮುಂದುವರೆಸಬೇಕು ಎಂದರು.
ಗವಿಸಿದ್ದಪ್ಪ ದ್ಯಾಮಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಹಕ್ಕುಗಳು ಹಾಗೂ ಸೌಲಭ್ಯಗಳನ್ನು ಪಡೆಯಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ಘೋಷಣೆಯನ್ನು ಮುಂದುವರೆಸಬೇಕಾಗಿದೆ. ಈ ಸಮಾವೇಶ ನಮ್ಮ ಬೇಡಿಕೆಗಳ ಈಡೇರಿಕೆಗಳಿಗೆ ಸ್ಪೂರ್ತಿಯಾಗಲಿ ಎಂದರು.
ರಾಜ್ಯ ಮಾದಿಗ ಸಮಾಜದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.
ಲಿಡಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಸಮುದಾಯದ ಪ್ರಮುಖರಾದ ಡಾ.ಶಿವಪ್ರಸಾದ, ಮಹಾಲಕ್ಷ್ಮೀ ಕಂದಂ, ನಾಗಲಿಂಗ ಮೊಳೆಕೊಪ್ಪ, ಮಾತನಾಡಿದರು. ನೀಲಕಂಠಪ್ಪ ಕುಸನೂರ, ಕರಿಯಪ್ಪ ಕಟ್ಟಿಮನಿ, ಮಾಲತೇಶ ಕರ್ಜಗಿ, ಸುರೇಶ ಆಸಾದಿ, ಜಗದೀಶ ಡೊಳ್ಳೇಶ್ವರ, ಮಂಜಪ್ಪ ಮರೋಳ, ಯಲ್ಲಪ್ಪ ಮಾಸೂರ, ಮಾರುತಿ ಸೊಟ್ಟಪ್ಪನವರ, ಚಂದ್ರಪ್ಪ ಹರಿಜನ, ಶಾರದಾ ದೊಡ್ಡಮನಿ, ಪಾರ್ವತಿ ಗೊಣಿಬಸಮ್ಮನವರ, ರಾಜು ಭರಡಿ, ಹನಮಂತಪ್ಪ ಹೌಂಶಿ, ಮಹೇಶಪ್ಪ ಶ್ಯಾಕರ, ಬಸವರಾಜ ಕಾಳೆ, ದೇವರಾಜ ಹರಿಜನ, ಇತರರು ಉಪಸ್ಥಿತರಿದ್ದರು.
ಸವಿತಾ ಮಣ್ಣಮ್ಮನವರ ಸ್ವಾಗತಿಸಿದರು. ಎಂ.ಆಂಜನೇಯ ನಿರೂಪಿಸಿದರು.