

ಹಾವೇರಿ: ಮಾದಿಗರ ಹಕ್ಕುಗಳು ಹಾಗೂ ಸದಾಶಿವ ಆಯೋಗದ ಜಾರಿಗೆ ಆಗ್ರಹಿಸಿ ಡಿ.18ರಂದು ಬೆಳಗ್ಗೆ 11 ಘಂಟೆಗೆ ನಗರದ ಜಿ.ಎಚ್. ಕಾಲೇಜು ಹಿಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾದಿಗರ ಆತ್ಮಗೌರವ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕು ಎಂದು ಹಾವೇರಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾದಿಗರ ಆತ್ಮಗೌರವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಾದಿಗ ಮುನ್ನಡೆ ಘೋಷ ವಾಕ್ಯದೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಮಾದಿಗರ ಆತ್ಮಗೌರವ ಸಮಾವೇಶ ನಡೆಯುತ್ತಿದೆ. ಸಮಾಜದ ಜನರು ಸರ್ಕಾರಗಳ ಸೌಲಭ್ಯ ಪಡೆಯಲು ಜಾಗೃತಿ ಮಾಡುವ ಕೆಲಸ ಹೆಚ್ಚು ಹೆಚ್ಚು ಆಗಬೇಕು ಎಂಬ ಉದ್ದೇಶದಿಂದ ಹಾವೇರಿಯಲ್ಲಿ ದಿ,18 ರಂದು ಆಯೋಜನೆ ಮಾಡಲಾಗಿದೆ. ಸಮಾವೇಶಕ್ಕೆ ರಾಜ್ಯದ ಪ್ರವಾಸ ತಂಡದ ಮುಖಂಡರಾದ ರಾಮಣ್ಣ ಬಳ್ಳಾಹುಣಸಿ, ಪೂಜಪ್ಪ, ಡಾ.ಶಿವಪ್ರಸಾದ ಚಿಕ್ಕಮಗಳೂರ, ಮಹಾಲಕ್ಷ್ಮೀ ಕಂದಾರಿ, ನಾಗಲಿಂಗ ಮಾಳೇಕೊಪ್ಪ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಜಿಲ್ಲೆಯ ಮಾದಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.
ಡಿಎಸ್‌ಎಸ್ ಕಾರ್ಯದರ್ಶಿ ಉಡಚಪ್ಪ ಮಾಳಗಿ ಮಾತನಾಡಿ, ನಮ್ಮ ಹಕ್ಕುಗಳನ್ನು ಪಡೆಯಲು ಸನ್ನದ್ಧರಾಗಬೇಕು. ಸರ್ಕಾರಗಳ ಸೌಲಭ್ಯ ಪಡೆದು ಸಮಾಜದ ಸರ್ವರೂ ಆರ್ಥಿಕ, ಸಾಮಾಜಿಕ, ರಾಜಕೀಯ, ಇನ್ನಿತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕು ಎಂದರು.
ನಿವೃತ್ತ ಉಪನಿರ್ದೇಶಕ ಎಂ.ಆಂಜನೇಯ, ದಲಿತ ಸಂಘಟನೆಗಳ ಪ್ರಮುಖರಾದ ಮಂಜಪ್ಪ ಮರೋಳ, ಮಾರುತಿ ಸೊಟ್ಟಪ್ಪನವರ, ಬಸವರಾಜ ಕಾಳೆ, ಜಗದೀಶ ಹರಿಜನ, ಹನುಮಂತಪ್ಪ ಸಿ.ಡಿ., ಮಹೇಶಪ್ಪ ಹರಿಜನ, ನಾಗರಾಜ ಬಣಕಾರ, ಶಿವಲಿಂಗಪ್ಪ ನಿಂಗಪ್ಪನವರ, ಹನುಮಂತ ಹೌಂಶಿ, ಮತ್ತಿತರರು ಪಾಲ್ಗೊಂಡಿದ್ದರು.