

ಹಾವೇರಿ: ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಮಾದಿಗ ಸಮಾಜದ ವತಿಯಿಂದ ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್.ಬೊಮ್ಮಾಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಚರಿಸಲಾಗುವುದು ಎಂದು ಮಾಜಿ ಸಚಿವ, ಮಾದಿಗ ಸಮಾಜದ ಹಿರಿಯ ಮುಖಂಡ ಹನಮಂತಪ್ಪ ಆಲ್ಕೋಡ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಜಿಲ್ಲಾ ಆದಿಜಾಂಬವ ಸಂಘದ ವತಿಯಿಂದ ಆಯೋಜಿಸಿದ್ದ ಮಾದಿಗ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಸ್.ಆರ್.ಬೊಮ್ಮಾಯಿ ಅವರು ಜನತಾ ಪರಿವಾರದ ಮೂಲಕ ಅನೇಕ ಶೋಷಿತ ವರ್ಗಗಳ ನಾಯಕರನ್ನು ಹುಟ್ಟುಹಾಕಿದ್ದಾರೆ. ಪ್ರಮುಖವಾಗಿ ಕೆ.ಬಿ.ಶಾಣಪ್ಪ, ರಮೇಶ ಜಿಗಜಿಗಣಗಿ, ಭೀಮ್ಮಣ್ಣ ಜಮಖಂಡಿ, ರತ್ನಮಾಲಾ ಸವಣೂರು, ಸೇರಿದಂತೆ ತಮಗೂ ಸಹ ಅಧಿಕಾರ ನೀಡುವ ಮೂಲಕ ಈ ಸಮಾಜಕ್ಕೆ ರಾಜಕೀಯ ಶಕ್ತಿ ನೀಡಿದ್ದಾರೆ. ಅವರ 100ನೇ ಜನ್ಮ ದಿನಾಚರಣೆಯನ್ನು ಮೂರು ಜಿಲ್ಲೆಯ ಮಾದಿಗ ಸಮಾಜದ ಮುಖಂಡರು ಆಚರಿಸಲು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ಮತ್ತೊಮ್ಮೆ ಸಭೆ ಸೇರಿ, ದಿನಾಂಕ ಹಾಗೂ ಸ್ಥಳ ನಿಗದಿಪಡಿಸುವುದಾಗಿ ತಿಳಿಸಿದರು.
ಆದಿಜಾಂಬವ ಮಾದಿಗ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ವೆಂಕಟೇಶ ಸಗಬಾಲ, ವೆಂಕಟೇಶ ದೊಡ್ಡಮನಿ, ನಾಗರಾಜ ಮಾಳಗಿ, ಚಂದ್ರಪ್ಪ ಹರಿಜನ, ಉಡಚಪ್ಪ ಮಾಳಗಿ, ಸಂತೋಷ ಹರಿಜನ, ಮಲ್ಲೇಶ ಕಡಕೋಳ, ಮಹೇಶ ಹರಿಜನ, ನಾಗರಾಜ ಬಣಕಾರ, ಕೃಷ್ಣ ಕರಜಗಿ, ರಾಜು ಹರಿಜನ, ಅಶೋಕ ಮರಿಯಣ್ಣನವರ, ಇತರರಿದ್ದರು.
ಒಳ ಮೀಸಲಾತಿಯಲ್ಲಿ ಗೊಂದಲ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿಯಲ್ಲಿ ಅನೇಕ ಗೊಂದಲಗಳಿದ್ದು, ಮುಂಬಡ್ತಿ, ನೇರ ನೇಮಕಾತಿಯ ಬಗ್ಗೆ ಸ್ಪಷ್ಟನೆ ಇಲ್ಲ. ಮಾದಿಗರಿಗೆ ಮೀಸಲಾತಿ ಸರಿಯಾಗಿ ಜಾರಿಯಾಗಿಲ್ಲ. ಈ ಬಗ್ಗೆ ಹೋರಾಟ ನಡೆಸಲಾಗುವುದು. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ವೇಳೆ ಮಾದಿಗ ಸಮಾಜಕ್ಕೆ ಒಳಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಪಾರಸು ಮಾಡಿದ್ದರು. ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲು ಜಾರಿ ಮಾಡಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು ಹನಮಂತಪ್ಪ ಆಲ್ಕೋಡ.