ಮಾದಿಗ ಸಮುದಾಯಕ್ಕೆ ಕಾಂಗ್ರೆಸ್‌ನಿಂದಲೂ ಅನ್ಯಾಯ; ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಬಿ.ಆರ್ ಭಾಸ್ಕರ ಪ್ರಸಾದ ಆರೋಪ

18 BR Bhaskara Prasad
Published on

ಹಾವೇರಿ: ದತ್ತಾಂಶ ಸಂಗ್ರಹಿಸಿ ಒಳಮೀಸಲಾತಿ ರಚನೆಗೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ವಿನಾಕಾರಣ ವಿಳಂಬ ಧೋರಣೆ ತೋರುವ ಮೂಲಕ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಹಾಗಾಗಿ, ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಕ್ರಾಂತಿಕಾರಿ ರಥಯಾತ್ರೆ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಾದಿಗ ಸಮುದಾಯದ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಬಿ.ಆರ್ ಭಾಸ್ಕರ ಪ್ರಸಾದ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 35 ವರ್ಷಗಳಿಂದ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವಂತೆ ನಿರಂತರ ಹೋರಾಟ ಮಾಡಲಾಗುತ್ತಿದೆ. ಅಧಿಕಾರಕ್ಕೆ ಬಂದ ಸರ್ಕಾರಗಳು ಮಾತ್ರ ಒಳಮೀಸಲಾತಿ ನೀಡದೇ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿವೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲ ಪಕ್ಷಗಳು ನಮ್ಮ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ಮೋಸ ಮಾಡಿವೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿತ್ತು, ಸದಾಶಿವ ಆಯೋಗದ ಕುಂಟುನೆಪ ಹೇಳಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಮಹದೇವಸ್ವಾಮಿ, ಹಾವನೂರ, ಕಾಂತರಾಜು ಆಯೋಗಗಳ ವರದಿ ಗೊತ್ತಿದ್ದರೂ, ಆಗಮೋಹನದಾಸ್ ಮಧ್ಯಂತರ ವರದಿಯ ಮೀಸಲಾತಿ ಜಾರಿ ಮಾಡದೇ ಅನ್ಯಾಯ ಎಸಗುತ್ತಿವೆ. ಈಗಾಗಲೇ ಎಲ್ಲ ಆಯೋಗಗಳ ವರದಿಯಲ್ಲಿರುವ ದತ್ತಾಂಶಗಳ ಸಂಗ್ರಹಣೆ ಅಧಿಕಾರಿಗಳಿಗೆ ಕೇವಲ 2-3 ದಿನ ಅಷ್ಟೇ ಸಾಕಾಗುತ್ತದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದತ್ತಾಂಶ ಸಂಗ್ರಹಣೆಗೆ 2-3 ತಿಂಗಳು ಕಾಲಾವಕಾಶ ತೆಗೆದುಕೊಂಡಿದ್ದು, ಈ ಮೂಲಕ ಮತ್ತೆ ಒಳಮೀಸಲಾತಿ ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಸರ್ಕಾರ ಒಳಮೀಸಲಾತಿ ರಚನೆ ಮಾಡದೇ ಉನ್ನತ ಹುದ್ದೆಗಳ ಭರ್ತಿ ಹಾಗೂ ಬಡ್ತಿ ನೀಡಿದೆ. ಒಳಮೀಸಲಾತಿ ನೀಡಿದರೆ ಮಾದಿಗ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಅನ್ಯಾಯಕ್ಕೆ ಒಳಗಾದ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್ ಮಾಳಗಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೊಮ್ಮೆ ಮಾದಿಗ ಸಮುದಾಯ ವಿರೋಧಿ ನೀತಿ ತಾಳುತ್ತದೆ. ಒಳಮೀಸಲಾತಿ ಇಲ್ಲದೇ ಮಾದಿಗ ಸಮುದಾಯ ಸರ್ಕಾರದ ಸೌಲಭ್ಯಗಳಿಂದ ವಂಚಿತಗೊಳ್ಳುವಂತಾಗಿದೆ. ಎಲ್ಲ ರಂಗಗಳಲ್ಲಿ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡಚಪ್ಪ ಮಾಳಗಿ, ಅಶೋಕ ಮರೆಯಣ್ಣನವರ, ನಾಗರಾಜ ಮಾಳಗಿ, ಎಂ. ಆಂಜನೇಯ, ಗಣೇಶ ಪೂಜಾರ, ಪ್ರಭುರಾಜ ಕೊಡ್ಲಿ, ಸಂಜೀವಗಾಂಧಿ ಸಂಜೀವಣ್ಣನವರ, ಅಶೋಕ ಮಾಳಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net