

ಹಾವೇರಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮಕೃಷ್ಣ ಬಾಳಪ್ಪ ಗುಡಗೇರಿ ಅವರ ಧಾರವಾಡದ ನಿವಾಸ ಹಾಗೂ ಬಾಡ ಗ್ರಾಪಂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಶನಿವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದರು. ದಾಳಿ ವೇಳೆ ಒಟ್ಟು 1.18 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಪಿಡಿಒ ರಾಮಕೃಷ್ಣ ಮೇಲೆ ಹಲವು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆ 18.73ಲಕ್ಷ ರೂ. ಮೌಲ್ಯದ ಎರಡು ನಿವೇಶನ, 55 ಲಕ್ಷ ರೂ. ಮೌಲ್ಯದ ಒಂದು ಮನೆ, 12.43 ಲಕ್ಷ ರೂ. ಮೌಲ್ಯದ 9.07 ಎಕರೆ ಜಮೀನು ಸೇರಿ ಒಟ್ಟು 32.82 ಲಕ್ಷ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 79,500 ರೂ. ನಗದು, 8.53 ಲಕ್ಷ ಮೌಲ್ಯದ ಚಿನ್ನಾಭರಣ, 13.50 ಲಕ್ಷ ಮೌಲ್ಯದ ವಾಹನಗಳು ಮತ್ತು ಸುಮಾರು 10 ಲಕ್ಷ ಮೌಲ್ಯದ ಇತರೆ ಪೀಠೋಪಕರಣ ಒಳಗೊಂಡ ಚರಾಸ್ತಿ ಪತ್ತೆಯಾಗಿವೆ.
ಒಟ್ಟು ಆಸ್ತಿ ಮೌಲ್ಯ 1,18,98,800 ರೂ. ಎಂದು ಅಂದಾಜಿಸಲಾಗಿದೆ. ಇದು ಅವರ ಒಟ್ಟಾರೆ ಆದಾಯ ಸೇರಿ ಶೇ.138ರಷ್ಟು ಹೆಚ್ಚುವರಿ ಆಸ್ತಿ ಮೌಲ್ಯವಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ. ಹಾವೇರಿ ಲೋಕಾಯುಕ್ತ ಡಿವೈಎಸ್‌ಪಿ ಮಧುಸೂದನ ಸಿ. ನೇತೃತ್ವದಲ್ಲಿ ಹಾವೇರಿ ಮತ್ತು ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.