

ಹಾವೇರಿ: ಜಮೀನಿನ ನಕಾಶೆ ವಿತರಣೆಗಾಗಿ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 15 ಸಾವಿರ ಲಂಚ ಸ್ವೀಕರಿಸಲು ಮುಂದಾಗಿದ್ದ ಹಾವೇರಿಯ ಭೂಮಾಪಕ ಅಶೋಕ ನೀಲಪ್ಪ ಎಚ್.ಜಿ. ಎಂಬಾತನನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ.
ತಾಲೂಕಿನ ಕಳ್ಳಿಹಾಳ ಗ್ರಾಮದ ಮಂಜುನಾಥ ಗದಿಗೆಪ್ಪ ಕಡ್ಲಿ ಎಂಬುವರು ತಮ್ಮ ತಂದೆಯವರಿಗೆ ಸಂಬಂಧಿಸಿದ ಜಮೀನುಗಳ ವಾಟ್ನಿ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದ ನಕಾಶೆ ಪೂರೈಸಲು ಹಾವೇರಿ ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಭೂಮಾಪಕ ಅಶೋಕ ನೀಲಪ್ಪ ಎಚ್.ಜಿ. 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು, 25 ಸಾವಿರ ರೂ.ಗೆ ಒಪ್ಪಿಕೊಂಡಿದ್ದ.
ಹಾವೇರಿಯ ಬಸವೇಶ್ವರ ನಗರ ಎ ಬ್ಲಾಕ್, 12ನೇ ಕ್ರಾಸ್ ಡಿಸಿ ಕಚೇರಿ ರಸ್ತೆ ಬಳಿ ಶನಿವಾರ ಮಂಜುನಾಥ ಅವರಿಂದ ಅಶೋಕ ಮುಂಗಡವಾಗಿ 15 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ ನೇತೃತ್ವದಲ್ಲಿ ತನಿಖಾಧಿಕಾರಿ ಮಂಜುನಾಥ ಪಂಡಿತ, ಪೊಲೀಸ್ ನಿರೀಕ್ಷಕ ಮುಸ್ತಾಕ್ ಅಹ್ಮದ್ ಶೇಖ್, ಸಿಬ್ಬಂದಿ ಸಿ.ಎಂ.ಬಾರ್ಕಿ, ಎಂ.ಕೆ.ನದಾಫ್, ಟಿ.ಇ.ತಿರುಮಲೆ, ಬಿ.ಎಂ.ಕರ್ಜಗಿ, ಎಂ.ಕೆ.ಲಕ್ಷ್ಮೇಶ್ವರ, ಆನಂದ ತಳಕಲ್ಲ, ಎಸ್.ಎನ್.ಕಡಕೋಳ, ಎಂ.ಸಿ.ಅರಸಿಕೇರಿ, ಎಂ.ಎಸ್.ಕೊಂಬಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.