

ಹಾವೇರಿ: ಕೆರೆ ಅಭಿವೃದ್ಧಿ ಕಾಮಗಾರಿಗಳ ಹಣ ಸಂದಾಯ ಮಾಡಲು ಗುತ್ತಿಗೆದಾರನಿಂದ 1,20,000 ರೂ. ಲಂಚ ಪಡೆಯುತ್ತಿದ್ದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಶಿವಲಿಂಗಸ್ವಾಮಿ ಹಲಗಲಿಮಠ ಎಂಬುವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಸವಣೂರ ಪಟ್ಟಣದ ಹೊರಕೇರಿ ಓಣಿ ನಿವಾಸಿ, 4ನೇ ದರ್ಜೆ ಗುತ್ತಿಗೆದಾರ ಸುರೇಶ ಕಳಸೂರ ಕೆಲ ಕೆರೆಗಳ ಅಭಿವೃದ್ಧಿ ಕಾಮಗಾರಿ ನಿರ್ವಹಿಸಿದ್ದರು. ಈ ಕಾಮಗಾರಿಗಳ ಹಣ ಸಂದಾಯ ಮಾಡಲು ಅಗತ್ಯವಾದ ಪತ್ರಗಳನ್ನು ನೀಡಲು ಶಿವಲಿಂಗಸ್ವಾಮಿ 2,20,000 ರೂ. ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 1,00,000 ರೂ. ಪಡೆದಿದ್ದರು. ಶುಕ್ರವಾರ ಧಾರವಾಡದ ನವಲೂರಿನ ನಿವಾಸದಲ್ಲಿ ಉಳಿದ 1,20,000 ರೂ. ಪಡೆದುಕೊಳ್ಳುವಾಗ ಹಾವೇರಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಿವಲಿಂಗಸ್ವಾಮಿಯನ್ನು ಬಂಧಿಸಿದ್ದಾರೆ. ಲೋಕಾ ಪೊಲೀಸರು ಈತನ ಮನೆ ಹಾಗೂ ಹಾವೇರಿಯ ಕಚೇರಿಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ತನಿಖೆ ಮುಂದುವರಿದಿದೆ.