ಹಾವೇರಿ: ಹಾವೇರಿ ಲೋಕಾಯುಕ್ತ ಅಧಿಕಾರಿಗಳಿಂದ ಸೆ.6ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವೆರೆಗೆ ರಾಣೆಬೆನ್ನೂರ ತಾಲೂಕು ಕಚೇರಿ ಸಭಾಭವನದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸಭೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.
ಸರ್ಕಾರಿ ಕಚೇರಿಗಳಲ್ಲಿ ದುರಾಡಳಿತ, ಸಾರ್ವಜನಿಕ ಕೆಲಸ ಕಾರ್ಯಗಳ ವಿಳಂಬ, ಕಳಪೆ ಕಾಮಗಾರಿ, ಸರ್ಕಾರಿ ನೌಕರರ ಅಕ್ರಮ ಆಸ್ತಿ ಗಳಿಕೆ, ಸರ್ಕಾರಿ ಹಣ ದುರುಪಯೋಗ, ಸಾರ್ವಜನಿಕ ಕೆಲಸಗಳಿಗೆ ಅಧಿಕಾರಿ, ನೌಕರರಿಂದ ಲಂಚ ಕೇಳುವ ದೂರುಗಳಿದ್ದರೆ ಲೋಕಾಯುಕ್ತ ನಡೆಸುವ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ದೂರುಗಳನ್ನು ಸಲ್ಲಿಸಬಹುದು. ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ. ಸಭೆಯ ನಂತರ ವಿವಿಧ ಇಲಾಖೆಯ ಕಚೇರಿಗಳಿಗೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ, ಡಿಎಸ್‌ಪಿ ಬಿ.ಪಿ.ಚಂದ್ರಶೇಖರ, ಪೊಲೀಸ್ ನಿರೀಕ್ಷಕಾದ ಮುಸ್ತಾಕ ಅಹ್ಮದ ಹಾಗೂ ಆಂಜನೇಯ ಎಚ್. ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಲೋಕಾಯುಕ್ತ ಕಚೇರಿ ಪ್ರಕಟಣೆ ತಿಳಿಸಿದೆ.