

ಹಾವೇರಿ: ಲೋಕಾಯುಕ್ತ ಅಧಿಕಾರಿ, ಸಿಬ್ಬಂದಿಗಳಿಂದಲೇ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿ ಬಂದಿದ್ದು, ಆರೋಪಿತರ ವಿರುದ್ಧ ನ್ಯಾಯಯುತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ನಗರದ ಜಿಲ್ಲಾ ಲೋಕಾಯುಕ್ತ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಲೋಕಾಯುಕ್ತ ನ್ಯಾ.ಬಿ.ಎಸ್ ಪಾಟೀಲರಿಗೆ ಮನವಿ ಪತ್ರ ರವಾನಿಸಿದರು.
ಲೋಕಾಯುಕ್ತಕ್ಕೆ ಭ್ರಷ್ಟರ ಕುರಿತು ದೂರು ಕೊಟ್ಟರೆ ಅವರಿಗೆ ಗಿರಾಕಿಗಳನ್ನು ಹಿಡಿದುಕೊಟ್ಟಂತೆ ಎಂಬ ಆರೋಪವಿದೆ. ಬೆಂಗಳೂರು ನಗರದ ಲೋಕಾಯುಕ್ತ ಎಸ್‌ಪಿ ಆಗಿದ್ದ ಶ್ರೀನಾಥ ಜೋಶಿ ಅವರ ಏಜೆಂಟರಾಗಿ ಪೊಲೀಸ್ ಕಾನ್‌ಸ್ಟೆಬಲ್ ನಿಂಗಪ್ಪ ಕೆಲಸ ಮಾಡುತ್ತಿದ್ದರು. ಅಧಿಕಾರಿಗಳಿಂದ ಬೆದರಿಸಿ, ಹಣ ಸುಲಿಗೆ ಮಾಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಬೆಂಗಳೂರಿನಲ್ಲಿ ಮಾತ್ರ ಈ ಘಟನೆ ಆಗಿದ್ದಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲೂ ಇಂತಹ ಘಟನೆಗಳು ನಡೆದಿವೆ. ಭ್ರಷ್ಟ ಅಧಿಕಾರಿ ಕುರಿತು ದೂರು ನೀಡಿದರೆ ಅವರನ್ನು ಬಚಾವ್ ಮಾಡಲಾಗುತ್ತಿದೆ. ಕರ್ತವ್ಯ ಲೋಪದ ಅನೇಕ ಕೇಸ್‌ಗಳನ್ನು ಸರಿಯಾಗಿ ವಿಚಾರಣೆ ಮಾಡದೇ ಹಲವು ಕೇಸ್‌ಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಹಾಗಾಗಿ, ಇಡೀ ಲೋಕಾಯುಕ್ತ ಸಂಸ್ಥೆಯನ್ನು ಶುದ್ದೀಕರಣ ಮಾಡಬೇಕು. ವ್ಯವಸ್ಥೆಯಲ್ಲಿ ಪಾರದರ್ಶಕತೆ, ದಕ್ಷತೆ ಬರಬೇಕಿದೆ. ಲೋಕಾಯುಕ್ತಕ್ಕೆ ಪ್ರಾಮಾಣಿಕ, ದಕ್ಷ ಅಧಿಕಾರಿಗಳನ್ನು ನೇಮಿಸಬೇಕು. ತಪ್ಪಿತಸ್ಥರಿಗೆ ಶೀಘ್ರದಲ್ಲೇ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಧರ್ಮರಾಜ ಬಿಂದಲಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಡಶೆಟ್ಟಿಹಳ್ಳಿ, ಕಾರ್ಯದರ್ಶಿಗಳಾದ ಚರಣರಾಜ ರೊಡ್ಡನವರ, ಈರಣ್ಣ ಬಾರಕೇರ, ಇಸ್ಮಾಯಿಲ್ ತೊಂಡೂರ, ಗಂಗಾ ಕೋರಿ, ಅನ್ನಪೂರ್ಣ ಕಮ್ಮಾರ, ಹನುಮಂತಪ್ಪ ದುಗ್ಗತ್ತಿ, ದೇವೇಂದ್ರಪ್ಪ ತಳವಾರ, ಇತರರು ಇದ್ದರು.