ಮೀಸಲಾತಿ ಕೈಬಿಟ್ಟು ನೇರಪಾವತಿ ವ್ಯವಸ್ಥೆ ಜಾರಿಗೊಳಿಸಿ; ನಗರಸಭೆ, ಪುರಸಭೆ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಟನೆ

20 HVR 4
Published on

ಹಾವೇರಿ: ರಾಜ್ಯ ಸರ್ಕಾರವು ಸಿ ಮತ್ತು ಡಿ ದರ್ಜೆಯ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಮತ್ತು ಮಹಿಳಾ ಮೀಸಲಾತಿ ಘೋಷಿಸಿದೆ. ಈ ಕೂಡಲೇ ಇದನ್ನು ಕೈಬಿಟ್ಟು ನೇರಪಾವತಿ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರದ ವಿರುದ್ಧ ಕೆಲಕಾಲ ಪ್ರತಿಭಟಿಸಿ, ನಂತರ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರ ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ 1.75 ಲಕ್ಷಕ್ಕೂ ಅಧಿಕ ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಬಹುತೇಕ ನೌಕರರಿಗೆ ಸಕಾಲಕ್ಕೆ ವೇತನ, ಭವಿಷ್ಯ ನಿಧಿ, ಕನಿಷ್ಠ ವೇತನ ಯಾವುದೂ ಸಮರ್ಪಕವಾಗಿ ಸಿಗುತ್ತಿಲ್ಲ. ಈ ಬಗ್ಗೆ ಹಕ್ಕುಗಳನ್ನು ಕೇಳಿದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಒಡ್ಡಲಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ನೇರಪಾವತಿ ವ್ಯವಸ್ಥೆ ಜಾರಿಗೊಳಿಸುವುದು ಸೂಕ್ತವಾದ ಕ್ರಮವಾಗಿದೆ.
ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ನೇಮಕ ಗೊಳಿಸುವಾಗ ದಲಿತ, ಹಿಂದುಳಿದ ವರ್ಗಗಳಿಗೆ ಮತ್ತು ಮಹಿಳೆಯರಿಗೆ ಮೀಸಲಾತಿ ಘೋಷಿಸಲಾಗಿದೆ. ವಾಸ್ತವದಲ್ಲಿ ಈಗಾಗಲೇ ಈ ಹುದ್ದೆಗಳಲ್ಲಿರುವ ಬಹುತೇಕರು ದಲಿತ ಇಲ್ಲವೇ ಹಿಂದುಳಿದ ವರ್ಗಗಳಿಗೆ ಸೇರಿದವರೇ ಆಗಿದ್ದಾರೆ. ಸರ್ಕಾರದ ಈ ಮೀಸಲಾತಿ ಘೋಷಣೆ ಅಪ್ರಸ್ತುತವಾಗಿದೆ. ನೂತನ ಮೀಸಲಾತಿ ಜಾರಿ ಹೆಸರಿನಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ತೊಂದರೆಯಾಗದಂತೆ, ಹೊಸ ನೇಮಕಾತಿಗಳಿಗೆ ಮಾತ್ರ ಮೀಸಲಾತಿ ಅನ್ವಯಿಸುವಂತೆ ತಿದ್ದುಪಡಿ ಮಾಡಬೇಕಿದೆ. ಇಲ್ಲದಿದ್ದಲ್ಲಿ ಇಪ್ಪತ್ತು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಹೊರಗುತ್ತಿಗೆ ನೌಕರರನ್ನು ಏಜೆನ್ಸಿಗಳು ಸಂಕಷ್ಟಕ್ಕೆ ಸಿಲುಕಿಸುವ ಅಪಾಯವಿದೆ.
ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದಂತೆ ರಾಜ್ಯದ ಎಲ್ಲ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಪದ್ಧತಿ ಬದಲು ನೇರಪಾವತಿ ವ್ಯವಸ್ಥೆಜಾರಿಗೆ ತರಬೇಕು. ಇದರಿಂದ ಏಜೆನ್ಸಿಗಳ ಶೋಷಣೆ ನಿಲ್ಲಲಿದೆ. ಕಾರ್ಮಿಕರಿಗೆ ಸೇವಾ ಭದ್ರತೆಯು ದೊರೆಯಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಬದ್ಧತೆ ತೋರುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಪ್ಪ ಹೊಸಮನಿ, ಪದಾಧಿಕಾರಿಗಳಾದ ಶಿವಪ್ಪ ಕಟ್ಟಿಮನಿ, ಗುರುನಾಥ ಡವೆಣ್ಣನವರ, ರಮೇಶ ಭೋವಿ, ಪ್ರಶಾಂತ ಇಂಗಳಗಿ, ನಾಗರಾಜ ಹಿರೇಕೆರೂರ, ಪ್ರಮುಖರಾದ ಪರಮೇಶ್ವರಪ್ಪ ಮೇಗಳಮನಿ, ನಾಗರಾಜ ಮಾಳಗಿ, ಹೊನ್ನಪ್ಪ ತಗಡಿನಮನಿ, ಸುಭಾಷ ಬೆಂಗಳೂರು, ಅಶೋಕ ಮರಿಯಣ್ಣನವರ, ಮತ್ತಿತರರು ಭಾಗವಹಿಸಿದ್ದರು.
ದಲಿತ ವಿರೋಧಿ ನೀತಿ ಖಂಡನೀಯ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಪದೇ ಪದೆ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಸರ್ಕಾರಿ, ಅರೆ ಸರ್ಕಾರಿ ನೌಕರಿ ತುಂಬಿಕೊಳ್ಳಲು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿರುವುದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿರೋಧಿ ನಿರ್ಣಯವಾಗಿದೆ. ಸರ್ಕಾರ ಕೇವಲ ಗುತ್ತಿಗೆದಾರರನ್ನು ಶ್ರೀಮಂತರನ್ನಾಗಿಸಿ ಅವರಿಂದ ಕಿಕ್ ಬ್ಯಾಕ್ ಪಡೆದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net