ಪ್ರತಿದಿನ ಯೋಗ ಮಾಡಿ, ಆರೋಗ್ಯವಾಗಿರಿ; ಲಯನ್ಸ್ ಶಾಲೆ ಬೇಸಿಗೆ ಕ್ರೀಡಾ ತರಬೇತಿ ಶಿಬಿರದಲ್ಲಿ ಪಿ.ಡಿ ಶಿರೂರ ಸಲಹೆ

Published on

ಹಾವೇರಿ: ಆಧುನಿಕ ಜಗತ್ತಿನಲ್ಲಿ ಆರೋಗ್ಯವಾಗಿರಲು ನಿತ್ಯವೂ ಕ್ರೀಡಾ ಚಟುವಟಿಕೆ ಮತ್ತು ಯೋಗದ ಅವಶ್ಯಕತೆ ಇದೆ. ಹತ್ತು ವರ್ಷದ ಮಕ್ಕಳಿಂದ ಎಂಬತ್ತು ವರ್ಷದವರೂ ಕೂಡ ಪ್ರತಿದಿನ ಯೋಗ ಮಾಡಬೇಕು. ಇದರಿಂದ ಆರೋಗ್ಯ ನಿಮ್ಮದಾಗುತ್ತದೆ ಎಂದು ಲಯನ್ಸ್ ಶಿಕ್ಷಣ ಸಂಸ್ಥೆಯ ಚೇರ್‌ಮನ್ ಪಿ.ಡಿ ಶಿರೂರ ಸಲಹೆ ನೀಡಿದರು.

ಲಯನ್ಸ್ ಏಜುಕೇಷನ್ ಸೊಸೈಟಿ, ಲಯನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವತಿಯಿಂದ ನಗರದ ಲಯನ್ಸ್ ಶಾಲೆಯಲ್ಲಿ ಆಯೋಜಿಸಿರುವ ಬೇಸಿಗೆ ಕ್ರೀಡಾ ಹಾಗೂ ಯೋಗ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ತರಬೇತುದಾರ ಆನಂದ ಲೋಖಂಡೆ ಮಾತನಾಡಿ, ಭಾರತದಲ್ಲಿ ಋಷಿಮುನಿಗಳ ಕಾಲದಿಂದ ಬೆಳೆದು ಬಂದ ಯೋಗ ಪದ್ಧತಿ, ಅದರ ಪ್ರಕಾರಗಳು, ಮಾಡುವ ವಿಧಾನ, ಅದರಿಂದ ದೊರೆಯುವ ಆರೋಗ್ಯ ವೃದ್ಧಿ ಕುರಿತು ತಿಳಿಸಿದರು. ದೈಹಿಕ ಮತ್ತು ಮಾನಸಿಕ ಶಾಂತಿಗೆ ಬೆಲೆ ಕಟ್ಟಲಾಗದ ಜೀವನಕ್ಕೆ ಇಂದಿನ ಒತ್ತಡದ ಬದುಕಿನಲ್ಲಿ ಪ್ರತಿದಿನ ಅರ್ಧ ಗಂಟೆಯಾದರೂ ಯೋಗ ಮಾಡುವಂತೆ ಕರೆ ನೀಡಿದರು.

ಶಿವಲೀಲಾ ಮೆಳ್ಳಾಗಟ್ಟಿ ಯೋಗ ಮತ್ತು ಪಿಸಿಯೋಥೆರಪಿ ಕುರಿತು ವಿವರಿಸಿದರು. ಆನಂದ ಲೋಖಂಡೆ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.

ಲಯನ್ಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಆರ್.ಎಸ್ ಮಾಗನೂರ, ಕಾರ್ಯದರ್ಶಿ ವಿ.ಜಿ ಬಣಕಾರ, ನಿರ್ದೇಶಕರಾದ ನಿರಂಜನ ತಾಂಡೂರ, ಅಶೋಕ ಹೇರೂರ, ಎಂ.ಸಿ ಮಳಿಮಠ, ಎಸ್.ಎಚ್ ಕಬ್ಬಿಣಕಂತಿಮಠ, ಇತರರು ಉಪಸ್ಥಿತರಿದ್ದರು.

ಶಿಕ್ಷಕಿ ಮಮತಾ ನಂದಿಹಳ್ಳಿ ಪ್ರಾರ್ಥಿಸಿದರು. ಪ್ರೌಢಶಾಲೆ ಮುಖ್ಯೋಪಾಧ್ಯಾಯ ಪಿ.ಎಸ್ ಹಲಸೂರ ಸ್ವಾಗತಿಸಿದರು. ಹಿರಿಯ ಶಿಕ್ಷಕ ಎಂ.ಎಂ ದೇಶಪಾಂಡೆ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಪಾರ್ವತಿ ಗುಡಗೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net