ಹಾವೇರಿ: ಶಿಕ್ಷಕ- ವಿದ್ಯಾರ್ಥಿಗಳ ನಡುವೆ ಪ್ರಾಚೀನ ಕಾಲದಿಂದಲೂ ಉತ್ತಮ ಅವಿನಾಭಾವ ಸಂಬಂಧ ಇರುವುದು ಸ್ಪಷ್ಟ. ಆದರೆ, ಇತ್ತೀಚಿನ ದಿನಗಳಲ್ಲಿ ಸಂಬಂಧ ಮಾಯವಾಗುತ್ತಿರುವ ಬಗ್ಗೆ ನಿವೃತ್ತ ಪ್ರಾಂಶುಪಾಲ ಪ್ರೊ.ಎನ್.ಬಿ.ಬಣಕಾರ ಕಳವಳ ವ್ಯಕ್ತಪಡಿಸಿದರು.
ನಗರದ ಲಯನ್ಸ್ ಪಿ.ಯು. ಕಾಲೇಜ್‌ನಲ್ಲಿ ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ-ಶಿಕ್ಷಕರ ನಡುವೆ ಪರಸ್ಪರ ವಿಶ್ವಾಸ, ಪ್ರೀತಿ, ತಿಳಿವಳಿಕೆ ಮೂಡುವ ನಿಟ್ಟಿನಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಚ್.ಎಫ್.ಪಾಣೀಗಟ್ಟಿ ಮಾತನಾಡಿ, ಪ್ರತಿಯೊಬ್ಬರಿಗೂ ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು. ನಂತರದ ಸ್ಥಾನ ಗುರುವಿಗೆ ನೀಡಿರುತ್ತಾರೆ. ಕಾರಣ ಶಿಕ್ಷಣದ ಮೂಲಾರ್ಥ ತಿಳಿಸಿ ಬದುಕನ್ನು ಹಸನ ಮಾಡುತ್ತಾರೆ ಎಂದರು.
ಉಪನ್ಯಾಸಕಿ ಪದ್ಮಪ್ರೀಯಾ ಹಾಗೂ ಉಪನ್ಯಾಸಕ ಪ್ರಮೋದ ಮಾತನಾಡಿದರು. ವಿದ್ಯೆ, ವಿನಯ ವಿದ್ಯಾರ್ಥಿಗಳಿಗೆ ಉಸಿರಾಟವಿದ್ದಂತೆ ಇದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಉಪನ್ಯಾಸಕ ಜಿ.ಎನ್.ಮಡಿವಾಳರ, ರುದ್ರಯ್ಯ ಹಿರೇಮಠ, ಉತ್ತಮ ಕಾಂಟೆ, ನಿಲೂಖಾನಂ ಪಠಾಣ, ಶೈಲಾ, ಇತರರು ಉಪಸ್ಥಿತ ರಿದ್ದರು. ಬೇಬಿ ಆಯೇಷಾ ಸ್ವಾಗತಿಸಿದರು. ಅಮಿತಾ ವಂದಿಸಿದರು. ಮಾಸಬಿ ಮತ್ತು ಐಶ್ವರ್ಯ ನಿರೂಪಸಿದರು.