ರುದ್ರಭೂಮಿಯಲ್ಲಿ 50 ಸಸಿ ನೆಟ್ಟ ಲಯನ್ಸ್ ಕ್ಲಬ್; ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜನೆ

2 HVR 4
Published on

ಹಾವೇರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾನುವಾರ ನಗರದ ಹೆಗ್ಗೇರಿ ರಸ್ತೆಯ ರುದ್ರಭೂಮಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ 50ಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಸುಭಾಸ ಹುಲ್ಯಾಳದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಗೆ ಮರಗಳನ್ನು ಕಡಿಯಲಾಗುತ್ತಿದೆ. ಇದರಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಮರಗಳು, ರಸ್ತೆ ಅಗಲೀಕರಣ, ಮನೆ ನಿರ್ಮಾಣ, ಭೂಮಿ ಸಮತಟ್ಟು ಹೀಗೆ ಹಲವು ಕಾರಣಗಳಿವೆ. ಆದರೆ, ಮರಗಳನ್ನು ನೆಡುವಲ್ಲಿ ಕಾಳಜಿ ತೋರುತ್ತಿಲ್ಲ. ಇದರಿಂದ ಇಡೀ ವಿಶ್ವಕ್ಕೆ ಶಾಖದ ಆಘಾತ ಸಮಸ್ಯೆ ಎದುರಾಗಿದೆ. ಇದರ ನೇರ ಪರಿಣಾಮವನ್ನು ದೆಹಲಿ ಮತ್ತು ನಮ್ಮ ಬೆಂಗಳೂರಿನಲ್ಲಿ ಕಾಣಬಹುದಾಗಿದೆ ಎಂದರು.

ನಗರದ ರುದ್ರಭೂಮಿಗೆ ಬರುವ ನಾಗರಿಕರು ಪ್ರತಿ ವ್ಯಕ್ತಿಯ ಅಂತಿಮ ನಮನ ಮತ್ತು ವಿಧಿವಿಧಾನಗಳನ್ನು ಪೂರ್ಣಗೊಳಿಸುವವರೆಗೆ ಅಂದರೆ ಸುಮಾರು 1-2 ಗಂಟೆಗಳ ಕಾಲ ಬಿಸಿಲಲ್ಲಿ ಕಾಯುವಂತಾಗಿದೆ. ಇದಕ್ಕೆ ಪರಿಹಾರ ಕಂಡು ಕೊಳ್ಳುವ ಜತೆಗೆ ಪರಿಸರದ ಕಾಳಜಿ ತೋರುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣ ಮತ್ತು ಸಾಮಾಜಿಕ ಕಳಕಳಿಯ ಕಾರ್ಯ ಎಂಬ ನೆಮ್ಮದಿ ನೀಡಿದೆ ಎಂದರು.

ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿರುಪಾಕ್ಷಪ್ಪ ಹಾವನೂರ, ಗಿರೀಶ ಬಣಕಾರ, ವಿ.ಜಿ ಬಣಕಾರ, ಎಸ್.ಎಚ್ ಕಬ್ಬಿಣಕಂತಿಮಠ, ಎ.ಎಚ್ ಕಬ್ಬಿಣಕಂತಿಮಠ, ನಿರಂಜನ ಹೇರೂರ, ಎಂ.ಎಸ್ ಹಿರೇಮಠ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಡಾ.ವಿಜಯಕುಮಾರ ಬಳಿಗಾರ, ಎಂ.ಸಿ ಮಳಿಮಠ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net