

ಹಾವೇರಿ: ಇಲ್ಲಿನ ಬಸವೇಶ್ವರ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲಯನ್ಸ್ ಕ್ಲಬ್, ಲಯನ್ಸ್ ಎಜ್ಯುಕೇಷನ್ ಸೋಸೈಟಿಗಳ ಸಹಯೋಗದಲ್ಲಿ ಏ.26ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಸಂಸ್ಥೆ ಅಧ್ಯಕ್ಷ ಸುಭಾಸ ಹುಲ್ಯಾಳದ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳು ಲಯನ್ಸ್ ಕ್ಲಬ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಪ್ರತಿ ತಿಂಗಳು 250ರಿಂದ 300 ಜನ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ 100ರಿಂದ 150 ಜನರನ್ನು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಲಾಗುತ್ತಿದೆ. ಆದರೆ, ಈ ಬಾರಿ ಕಣ್ಣು ಮಾತ್ರವಲ್ಲದೇ ಹೃದಯ, ನರರೋಗ, ಮೂತ್ರಕೋಶ, ಮೂತ್ರಪಿಂಡ, ಗ್ಯಾಸ್ಟೋಸೈನ್ಸ್, ಚಿಕ್ಕಮಕ್ಕಳ ತಜ್ಞರು, ಸ್ತ್ರೀರೋಗ, ಎಲುಬು ಮತ್ತು ಕೀಲು, ದಂತ, ಚರ್ಮ ರೋಗ ಹೀಗೆ ಸುಮಾರು 15ಕ್ಕೂ ಹೆಚ್ಚು ವಿವಿಧ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬೆಳಗ್ಗೆ 10ರಿಂದ 12ಗಂಟೆವರೆಗೆ ನೋಂದಣಿಗೆ ಅವಕಾಶವಿದ್ದು, ಜನಸಾಂದ್ರತೆ ಆಧರಿಸಿ ನೋಂದಣಿ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತದೆ. ಸಾಮಾನ್ಯ ತಪಾಸಣೆ ಜತೆಗೆ ವಿಶೇಷ ತಪಾಸಣೆಗೂ ಒತ್ತು ನೀಡಲಾಗಿದೆ. ಉಚಿತವಾಗಿ ಇಸಿಜಿ, ಇಕೋ, ಡಯಾಬಿಟಿಕ್ ಪೆರಿಫೆರಲ್ ನ್ಯೂರೋಪತಿ ಸ್ಕ್ರೀನಿಂಗ್ ತಪಾಸಣೆಯನ್ನೂ ಮಾಡಲಾಗುತ್ತಿದೆ. ಕನಿಷ್ಠ ಔಷಧೋಪಚಾರವನ್ನೂ ಮಾಡಲಾಗುವುದು ಎಂದರು.
ಲಯನ್ಸ್ ಕ್ಲಬ್ನ ಕಾರ್ಯದರ್ಶಿ ವಿರುಪಾಕ್ಷಪ್ಪ ಹಾವನೂರ ಮಾತನಾಡಿ, ಶಿಬಿರದಲ್ಲಿ ದಾವಣಗೆರೆ ಎಸ್.ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯ ಡಾ.ಮಧು, ಡಾ.ವಿಕಾಸ ಕೆ.ಜಿ., ಡಾ.ನವೀನ ರಾಯ್ಕರ, ಡಾ.ಚೇತನ ಕೆ.ಎಂ., ಮನೋವೈದ್ಯ ಡಾ.ವಿಜಯಕುಮಾರ ಬಳಿಗಾರ, ಡಾ.ಅನುರಾಧಾ ಹಿರೇಮಠ, ಡಾ.ನೀಲಾ ಹಿರೇಮಠ, ಡಾ.ಸಿದ್ದೇಶ್ವರ ಹಿರೇಮಠ ಹಾಗೂ ಡಾ.ಮೇಘನಾ ರಾಠೋಡ ಪಾಲ್ಗೊಳ್ಳಲಿದ್ದಾರೆ. ನೇತ್ರದಾನ, ದೇಹದಾನದ ಕುರಿತು ಅರಿವು ಮೂಡಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಖಜಾಂಚಿ ಗಿರೀಶ ಬಣಕಾರ ಇತರರಿದ್ದರು.