

ಹಾವೇರಿ: ಚರ್ಮದ ವಸ್ತುಗಳ ತಯಾರಿಕೆ ತರಬೇತಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ 90 ತರಬೇತುದಾರರು ಚರ್ಮದ ವಸ್ತುಗಳನ್ನು ತಯಾರಿಸುವ ಯಂತ್ರ, ಟೂಲ್ ಕಿಟ್ ವಿತರಿಸುವಂತೆ ಆಗ್ರಹಿಸಿ ಇಲ್ಲಿನ ಗುತ್ತಲ ರಸ್ತೆಯ ಶ್ರೀ ಶಿವಬಸವ ಕಲ್ಯಾಣ ಮಂಟಪದ ಪಕ್ಕದ ಕೌಶಲ ಸಂವರ್ಧನಾ ಕೇಂದ್ರ(ಕೆಎಸ್‌ಕೆ)ಕ್ಕೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ (ಲಿಡಕರ್) ನಿಗಮದಿಂದ 2023ರ ಜನವರಿಯಲ್ಲಿ ಚಪ್ಪಲಿ, ಬ್ಯಾಗ್ ಸೇರಿದಂತೆ ಚರ್ಮದ ವಸ್ತುಗಳ ತಯಾರಿಕೆ ಕುರಿತು ಮೊದಲ ಬ್ಯಾಚ್ ತರಬೇತಿ ಆರಂಭಿಸಲಾಗಿತ್ತು. ಈ ಸಂದರ್ಭದಲ್ಲಿ ತರಬೇತಿ ಪಡೆದವರಿಗೆ ಚರ್ಮದ ವಸ್ತುಗಳನ್ನು ತಯಾರಿಸುವ ಯಂತ್ರ, ಕಿಟ್, ಪ್ರಮಾಣ ಪತ್ರ, 6 ಸಾವಿರ ರೂ. ಸಹಾಯಧನ ನೀಡುವುದಾಗಿ ಘೋಷಿಸಿದ್ದರು.
6 ಸಾವಿರ ರೂ. ಸಹಾಯಧನ ತರಬೇತುದಾರರಿಗೆ ನೀಡಲಾಗಿದೆ. ಆದರೆ, ಟೂಲ್‌ಕಿಟ್ ಹಾಗೂ ಯಂತ್ರ ಕೊಡುವ ಕುರಿತು ಲಿಡಕರ್ ನಿಗಮದವರು ಚಕಾರ ಎತ್ತುತ್ತಿಲ್ಲ. ಈಗ ನಾಲ್ಕನೇ ಬ್ಯಾಚ್‌ನ ತರಬೇತಿ ನಡೆದಿದೆ. ಮೂರು ಬ್ಯಾಚ್‌ನವರಿಗೆ ಈಗ ಕೇವಲ ಪ್ರಮಾಣ ಪತ್ರ ತೆಗೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ಬಡ ಜನರ ಜೀವನೋಪಾಯಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತರಬೇತಿ ಆರಂಭಿಸಲಾಗಿದೆ. ಹೊಲಿಗೆ ಯಂತ್ರ, ಕಿಟ್ ನೀಡದಿದ್ದಲ್ಲಿ ಈ ತರಬೇತಿಗೆ ಅರ್ಥವೇ ಇಲ್ಲದಂತಾಗುತ್ತದೆ. ಈ ಬಗ್ಗೆ ನಿಗಮ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲ 90 ತರಬೇತುದಾರರಿಗೆ ಈ ಕೂಡಲೇ ಯಂತ್ರ, ಟೂಲ್ ಕಿಟ್ ವಿತರಿಸಬೇಕು ಎಂದು ಪ್ರತಿಭಟನಾಕಾರರಾದ ಗೀತಾ ಸಾಂಕೆನ್ನವರ, ದ್ರಾಕ್ಷಾಯಿಣಿ ಸವದತ್ತಿ, ಸುರೇಶ ಬೋಸಲೆ, ಸೇರಿದಂತೆ ಇತರರು ಒತ್ತಾಯಿಸಿದರು. ತರಬೇತಿ ಬೋಧಕ ಅಶೋಕ ಬರೂರು ಇತರರಿದ್ದರು.
ಕೋಟ್:
ನಿರಂತರ ಕಲಿಕಾ ಕೇಂದ್ರ ಆರಂಭಿಸಿದಾಗ ನಿಗಮದಿಂದ ಟೂಲ್ ಕಿಟ್, ಮಷಿನ್ ಕೊಡುವುದಾಗಿ ಹೇಳಿದ್ದು ನಿಜ. ಅನುದಾನದ ಕೊರತೆಯಿಂದ ಯಂತ್ರ ವಿತರಣೆ ತಡವಾಗಿದೆ. ಸದ್ಯ 30 ಮಷಿನ್ ಇದ್ದು, ಇನ್ನರು 60 ಮಷಿನ್, ಟೂಲ್‌ಕಿಟ್ ವಿತರಣೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಾಕಿ ಯಂತ್ರಗಳು ಬಂದ ಕೂಡಲೇ ತರಬೇತುದಾರರಿಗೆ ವಿತರಿಸಲಾಗುವುದು.
> ಕೃಷ್ಣಪ್ಪ ಎಚ್., ಜಿಲ್ಲಾ ಸಂಯೋಜಕ, ಲಿಡಕರ್ ನಿಗಮ