ಗಿನ್ನೆಸ್ ಸಾಧನೆ ಮೂಲಕ ಎಲ್‌ಐಸಿ ಮೈಲಿಗಲ್ಲು; ನಿಗಮದ ಶಾಖಾಧಿಕಾರಿ ಪ್ರಶಾಂತ ಮದಿಹಾಳ ಹೇಳಿಕೆ

6 HVR 4
Published on

ಹಾವೇರಿ: ಸುಧೀರ್ಘ 69 ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಗಿನ್ನೆಸ್ ದಾಖಲೆ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ದೇಶದಲ್ಲಿ ಭ್ರಷ್ಟಾಚಾರ ರಹಿತ ಯಾವುದಾದರೂ ಸಂಸ್ಥೆ ಇದ್ದರೆ ಅದು ನಮ್ಮ ಜೀವ ವಿಮಾನ ನಿಗಮ ಎಂದು ನಿಗಮದ ಶಾಖಾಧಿಕಾರಿ ಪ್ರಶಾಂತ ಮದಿಹಾಳ ಹೇಳಿದರು.

ನಗರದ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಗುರುವಾರ ಆಯೋಜಿಸಿದ್ದ ವಿಮಾ ಸಪ್ತಾಹ ಸಮಾರೋಪದಲ್ಲಿ ಅವರು ಮಾತನಾಡಿದರು. ಜನವರಿ 30, 2025ರಂದು ಅತಿ ಹೆಚ್ಚು ವಿಮಾ ಪಾಲಿಸಿಗಳನ್ನು ಮಾಡಿದ್ದಕ್ಕಾಗಿ ಜಾಗತಿಕ ಗಿನ್ನೆಸ್ ದಾಖಲೆಗೆ ಎಲ್‌ಐಸಿ ಭಾಜನವಾಗಿದೆ.

ಇದಕ್ಕೆ ಎಲ್ಲ ವಿಮಾ ಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿಗಳ ಸಾಂಘಿಕ ಪ್ರಯತ್ನ ಕಾರಣವಾಗಿದೆ. ದೇಶದ ಗಡಿಯಲ್ಲಿ ಸೈನಿಕರು ದೇಶ ರಕ್ಷಣೆ ಮಾಡಿದಂತೆ ವಿಮಾ ಪ್ರತಿನಿಧಿಗಳು ಆಂತರಿಕ ಸೈನಿಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ನೂರಾರು ಸಿಬ್ಬಂದಿ ವರ್ಗದವರಿಗೆ ಇದೊಂದು ಮಾತೃ ಸಂಸ್ಥೆಯಾಗಿದೆ ಎಂದರು.

ಲೇಖಕ ಹನುಮಂತಗೌಡ ಗೊಲ್ಲರ ಮಾತನಾಡಿ, ನಾವು ಮಾಡುವ ಕೆಲಸವನ್ನು ಪ್ರೀತಿಸಿದರೆ ಕೆಲಸ ಎಂದಿಗೂ ಹೊರೆಯಾಗುವುದಿಲ್ಲ. ಆನಂದವನ್ನೇ ತರುವ ಹೊಳೆಯಾಗುತ್ತದೆ. ಅಲ್ಲದೆ ಅದರಿಂದ ತೃಪ್ತಿ ಮತ್ತು ಯಶಸ್ಸು ಸಿಗಲು ಸಾಧ್ಯ. ನೀವು ಕರ್ತವ್ಯಕ್ಕೆ ಸಲಾಂ ಹೊಡೆದರೆ ಜೀವನದಲ್ಲಿ ಯಾರಿಗೂ ಸಲಾಂ ಹೊಡೆಯಬೇಕಾಗಿಲ್ಲ. ಕರ್ತವ್ಯ ಭ್ರಷ್ಟರಾದರೆ ಪ್ರತಿಯೊಬ್ಬರಿಗೂ ಸಲಾಂ ಹೊಡೆಯಬೇಕಾಗುತ್ತದೆ ಎಂದು ಅಬ್ದುಲ್ ಕಲಾಂ ಅವರ ಮಾತುಗಳನ್ನು ಪ್ರಸ್ತಾಪಿಸಿದರು. ನಾವು ನಿಷ್ಠೆಯಿಂದ ಮಾಡುವ ಕಾಯಕವೇ ಪೂಜೆಯಾಗಬೇಕೇ ವಿನಹ ಪೂಜೆಯೇ ಕಾಯಕವಾಗಬಾರದು ಎಂದರು.

ಸಪ್ತಾಹದ ಅಂಗವಾಗಿ ಪ್ರತಿನಿಧಿಗಳಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲೆ, ರಸಪ್ರಶ್ನೆ ಹಾಗೂ ಮೋಜಿನ ಆಟಗಳ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಪ್ರಾರಂಭದಲ್ಲಿ ಸಾಮೂಹಿಕ ನಿಗಮ ಗೀತೆ ಹಾಡಿದರು. ಅಧಿಕಾರಿ ಎಸ್.ಶಿವಕುಮಾರ ಸ್ವಾಗತಿಸಿದರು. ಪ್ರತಿನಿಧಿ ಮಂಜುನಾಥ ಮುಗದೂರ ಅತಿಥಿಗಳ ಪರಿಚಯಿಸಿದರು. ಆಡಳಿತ ಅಧಿಕಾರಿ ಮಧುಕರ ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಶಾಖಾಧಿಕಾರಿ ಗುರುರಾಜ ಶೆಟ್ಟಿ ನಿರೂಪಿಸಿದರು. ಅಭಿವೃದ್ಧಿ ಅಧಿಕಾರಿ ಜೋಗೇಶ ಎಚ್.ಎನ್. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net