ಎಲ್.ಜಿ ಹಾವನೂರ ಹಿಂದುಳಿದ ವರ್ಗಗಳ ಅಂಬೇಡ್ಕರ್; ಎಲ್.ಜಿ.ಎಚ್. ಜನ್ಮದಿನಾಚರಣೆಯಲ್ಲಿ ಸಾಹಿತಿ ಸತೀಶ ಕುಲಕರ್ಣಿ ಅಭಿಪ್ರಾಯ

26 HVR 6
Published on

ಹಾವೇರಿ: ನಾಡು ಕಂಡ ಶ್ರೇಷ್ಠ ಕಾನೂನು ತಜ್ಞ, ದಕ್ಷಿಣ ಆಫ್ರಿಕಾದ ಸಂವಿಧಾನ ರಚನಾ ಸಲಹಾ ಸಮಿತಿ ಸದಸ್ಯರಾಗಿ, ಹಿಂದುಳಿದ ವರ್ಗದ ಆಯೋಗದ ಪ್ರಥಮ ಅಧ್ಯಕ್ಷರಾಗಿ ಬಹುಸಂಖ್ಯಾತ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯದ ಮೂಲಕ ಸಮ ಸಮಾಜವನ್ನು ನಿರ್ಮಿಸಬೇಕೆಂಬ ಕನಸು ಕಂಡು, ಅದನ್ನು ನನಸಾಗಿಸಲು ಶ್ರಮಿಸಿದ ಮಹಾನ್ ಚೇತನ ಎಲ್.ಜಿ ಹಾವನೂರ (ಎಲ್‌ಜಿಎಚ್) ಅವರು ಕನ್ನಡ ನಾಡಿನ ಹಿಂದುಳಿದ ವರ್ಗಗಳ ಪಾಲಿನ ಅಂಬೇಡ್ಕರ್ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ನಗರದಲ್ಲಿ ಮಂಗಳವಾರ ಎಲ್.ಜಿ ಹಾವನೂರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಶ್ರಮಿಕ ಪ್ರಕಾಶನದಿಂದ ಪ್ರಕಟಿಸಿರುವ ‘ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ ಹಾವನೂರ’ ಪುಸ್ತಕ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬದುಕಿನುದ್ದಕ್ಕೂ ಎದುರಾದ ಅವಮಾನಗಳನ್ನು ಮೆಟ್ಟಿ ಎತ್ತರಕ್ಕೆ ಬೆಳೆದ ಮಹಾನ್ ಚೇತನದ ಬದುಕು ಸಾಧನೆಗಳನ್ನು ಸ್ಮರಿಸಬೇಕಿದೆ ಎಂದರು.

ಹಿರಿಯ ಸಾಹಿತಿ ಲತಾ ಹಳಕೊಪ್ಪ ಮಾತನಾಡಿ, ಇಂತಹ ನಾಯಕನ ಸ್ಮರಣೆಯನ್ನು ಜೀವಂತವಾಗಿಡಲು ಸರ್ಕಾರ ಇವರ ಜನ್ಮದಿನಾಚರಣೆ ಆಚರಿಸಬೇಕು. ಅವರು ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆ ಇಂದಿನ-ಮುಂದಿನ ಜನಾಂಗಕ್ಕೆ ತಿಳಿಸುವ ನಿಟ್ಟಿನಲ್ಲಿ ಸರ್ಕಾರ ಅವರ ಜೀವನ-ಸಾಧನೆ ಪಠ್ಯದಲ್ಲಿ ಅಳವಡಿಸಬೇಕು. ಎಲ್.ಜಿ.ಹಾವನೂರ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಬೇಕು, ಹಾವೇರಿ ವಿಶ್ವ ವಿದ್ಯಾಲಯಕ್ಕೆ ಹಾವನೂರ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದರು.

ಸಾಹಿತಿ ಡಾ.ರಮೇಶ ತೆವರಿ ಕೃತಿಯ ಕುರಿತು ಮಾತನಾಡಿ, ಎಲ್.ಜಿ ಹಾವನೂರ ಅವರು, ಬಾಲ್ಯದಿಂದಲೂ ಬಡತನ, ಹಸಿವು, ಅವಮಾನಗಳನ್ನು ಅರಗಿಸಿಕೊಂಡವರು. ಉಂಡ ನೋವುಗಳೇ ಸಾಮಾಜಿಕ ಸ್ವಾಸ್ಥ್ಯಕ್ಕೆ ಅಗತ್ಯವಿರುವ ಮದ್ದನ್ನು ರೂಪಿಸುವ ನಿಟ್ಟಿನಲ್ಲಿ ಅವರನ್ನು ಅಣಿಗೊಳಿಸಿದವು. ಸಾಹಿತಿ ಬಿ.ಶ್ರೀನಿವಾಸ ಅವರು ಎಲ್.ಜಿ ಹಾವನೂರ ಬದುಕಿನ ಸಮಗ್ರ ನೋಟವನ್ನು ಸಾಮಾಜಿಕ ನ್ಯಾಯದ ಸಾಕ್ಷಿ ಪ್ರಜ್ಞೆ ಎಲ್.ಜಿ.ಹಾವನೂರ ಪುಸ್ತಕದಲ್ಲಿ ದಾಖಲಿಸುವ ಮೂಲಕ ಹಿಂದುಳಿದವರ ಏಳ್ಗೆಗಾಗಿ ಹಾವನೂರು ಅವರು ತಮ್ಮ ವಿದ್ವತ್ತನ್ನೆಲ್ಲ ಧಾರೆ ಎರೆದು ಹೋರಾಟ ಮಾಡಿರುವುದನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.

ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಮೇಶ ಆನವಟ್ಟಿ, ತಾಲೂಕು ಅಧ್ಯಕ್ಷ ಅಶೋಕ ಹರನಗಿರಿ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ರವಿ ಹಾದಿಮನಿ, ಬಸವರಾಜ ಹಾದಿಮನಿ ಮಾತನಾಡಿದರು.

ಹಾವನೂರು ಅವರ ಬಂಧುಗಳಾದ ಶ್ರೀಧರ ದೊಡ್ಡಮನಿ ಹಾಗೂ ಪ್ರಶಾಂತ ನಾಲವಾರ, ಜಮೀರ್ ಜಿಗರಿ, ಪೀರಸಾಬ ಚೋಪದಾರ, ನಾಗರಾಜ ಬಡಮ್ಮನವರ, ಸಂಜಯಗಾಂಧಿ ಸಂಜೀವಣ್ಣನವರ, ಪ್ರಾ.ಎಂ ಆಂಜನೇಯ, ಹುಚ್ಚೇಶ ವಾಲೀಕಾರ, ಮನೋಹರ ಹಾದಿಮನಿ, ಆನಂದ ಬೆಂಡಿಗೇರಿ, ಬಸವರಾಜ ಮಾಳಗಿ, ಮತ್ತಿತರರು ಉಪಸ್ಥಿತರಿದ್ದರು.

ಅಮೃತ ಗುಂಜಾಳ ಸ್ವಾಗತಿಸಿದರು. ಲೇಖಕ, ಪ್ರಕಾಶಕ ಮಾಲತೇಶ ಅಂಗೂರ ಪ್ರಾಸ್ಥಾವಿಕವಾಗಿ ಮಾತನಾಡಿದರು. ರಮೇಶ ಜಾಲಿಹಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net