ಹಾವೇರಿ: ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ಅರ್ಹ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ಎರಡು ವರ್ಷಗಳ ತರಬೇತಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
2024-25ನೇ ಸಾಲಿನಲ್ಲಿ ಅಂತಿಮ ಕಾನೂನು ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಮತ್ತು ವಕೀಲ ವೃತ್ತಿ ನಡೆಸಲು ಅರ್ಹತೆ ಪಡೆದಿರುವ ಕಾನೂನು ಪದವೀಧರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿ 40 ವರ್ಷದೊಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ಮೀರಿರಬಾರದು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಎರಡು ವರ್ಷಗಳ ಅವಧಿಗೆ ಸರ್ಕಾರಿ ವಕೀಲರು ಅಥವಾ ಸರ್ಕಾರಿ ಅಭಿಯೋಜಕರು ಅಥವಾ ನುರಿತ ವಕೀಲರ ಅಧೀನದಲ್ಲಿ ವಕೀಲರ ವೃತ್ತಿಯ ಪ್ರಾಯೋಗಿಕ ತರಬೇತಿ ಪಡೆಯಲು ನಿಯೋಜಿಸಿ ಪ್ರತಿ ತಿಂಗಳು 10 ಸಾವಿರ ರೂ. ಶಿಷ್ಯವೇತನ ಮಂಜೂರು ಮಾಡಲಾಗುವುದು.
ಜು.1ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ವರ್ಷದ ಎಲ್ಲ ದಿನಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ವೇಳೆಯಲ್ಲಿ ಸಂಬಂಧಿಸಿದ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಬಹುದು ಎಂದು ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.