

ಹಾವೇರಿ: ಫಾಸ್ಟ್‌ಫುಡ್‌ಗೆ ದಾಸರಾಗದೇ ಉತ್ತಮ ಪೌಷ್ಠಿಕ ಆಹಾರ ಸೇವಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿ ಪರಿಚಯಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೈಲಜಾ ಎಚ್.ವಿ. ಹೇಳಿದರು.
ನಗರದ ಜಿಲ್ಲಾ ನೌಕರರ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಕೀಲರ ಸಂಘ, ಶಿಶು ಅಭಿವೃದ್ಧ ಇಲಾಖೆ, ತಾಲೂಕು ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಶ್ವ ಪೋಷಣ ದಿನಾಚರಣೆ ಹಾಗೂ ರಾಷ್ಟ್ರೀಯ ಪೋಷಣ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಂದಿರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಠಿಕತೆ ತೊಡೆದು ಹಾಕಲು ಸರ್ಕಾರ ಜಾರಿಗೊಳಿಸಿದ ಯೋಜನೆಗಳು ಎಲ್ಲರೂ ತಲುಪಬೇಕು. ಅಪೌಷ್ಠಿಕತೆ ನಿವಾರಣೆಗೆ ಸಿರಿಧಾನ್ಯಗಳು, ಮೊಳಕೆಕಾಳು, ಹಣ್ಣು-ತರಕಾರಿಗಳನ್ನು ದೈನಂದಿನ ಆಹಾರದಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು.
ಕಾನೂನು ನೆರವು ಸಹಾಯಕ ಅಭಿರಕ್ಷಣಾ ವಕೀಲ ಎನ್.ಎನ್.ಡಿಳ್ಳೆಪ್ಪನವರ ಅಪೌಷ್ಠಿಕ ಆಹಾರ ಮತ್ತು ಪೋಕ್ಸೋ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ರಾಷ್ಟ್ರೀಯ ಲೋಕ ಅದಾಲತ್ ಹಾಗೂ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ, ಖಾಯಂ ಜನತಾ ನ್ಯಾಯಾಲಯದ ಉಪಯುಕ್ತ ಸೇವೆಗಳು ಹಾಗೂ ಘರ್ ಘರ್ ಮೇ ನ್ಯಾಯ ಕೀ ಜಾಗೃತಿ ಉಚಿತ ಕಾನೂನು ಅರಿವು ಕುರಿತು ಪ್ರಚಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಜಿಲ್ಲಾ ನಿರೂಪಣಾಧಿಕಾರಿ ಶೈಲಾ ಕುರಹಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೇತ್ರಾವತಿ, ಇತರರು ಉಪಸ್ಥಿತರಿದ್ದರು.
ಉಚಿತ ಸಹಾಯವಾಣಿ (15100)ಗೆ ಕರೆ ಮಾಡಿ
ಅಗತ್ಯವಿರುವ ಜನರು ರಾಷ್ಟ್ರೀಯ ಲೋಕ ಅದಾಲತ್ ಹಾಗೂ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನದ ಸದುಪಯೋಗ ಪಡೆಯಬೇಕು. ಜನತಾ ನ್ಯಾಯಾಲಯದಲ್ಲಿಯೂ ಯಾವುದೇ ಖರ್ಚಿಲ್ಲದೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು. ಘರ್ ಘರ್ ಮೇ ನ್ಯಾಯ ಕೀ ಜಾಗೃತಿ ಎಂಬ ಘೋಷವಾಕ್ಯದೊಂದಿಗೆ ಜನಸಾಮಾನ್ಯರಿಗೆ ಉಚಿತ ಕಾನೂನು ಅರಿವು ಮತ್ತು ನೆರವು ನೀಡಲಾಗುತ್ತಿದೆ. ಜಿಲ್ಲಾ ಜಾಗೃತಿ ಸಮಿತಿಯನ್ನೂ ರಚಿಸಲಾಗಿದೆ. ಏನಾದರೂ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಸಹಾಯವಾಣಿ 15100ಗೆ ಕರೆ ಮಾಡಬಹುದು ಎಂದು ನ್ಯಾ.ಶೈಲಜಾ ಎಚ್.ವಿ. ಹೇಳಿದರು.