

ಹಾವೇರಿ: ಜಿಯೋ ಟ್ಯಾಗ್ (ಜಿಪಿಎಸ್) ಇಲ್ಲದ ಫೋಟೋ ತೋರಿಸಿ ಲಾರ್ವಾ ಸಮೀಕ್ಷೆಯ ನಾಟಕವಾಡುತ್ತಿದ್ದವರ ಆಟ ಇನ್ಮುಂದೆ ನಡೆಯುವುದಿಲ್ಲ. ಲಾರ್ವಾ ಸರ್ವೆ ಮಾಡುವವರು ಕಡ್ಡಾಯವಾಗಿ ಜಿಯೋ ಟ್ಯಾಗ್ ಇರುವ ಫೋಟೋಗಳನ್ನೇ ದಾಖಲಿಸಬೇಕೆಂದು ಹಾವೇರಿಯ ನೂತನ ಕುಟುಂಬ ಮತ್ತು ಆರೋಗ್ಯ ಕಲ್ಯಾಣಾಧಿಕಾರ ಡಾ.ರಾಜೇಶ ಸುರಗಿಹಳ್ಳಿ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ರೋಗವಾಹಕಗಳ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅನ್ವಯ ರೋಗವಾಹಕ ರೋಗಗಳಾದ ಮಲೇರಿಯಾ, ಡೆಂೆ, ಚಿಕೂನ್‌ಗುನ್ಯ, ಮೆದುಳು ಜ್ವರ, ಆನೆಕಾಲುರೋಗ, ಮತ್ತಿತರ ಕಾಯಿಲೆಗಳಿಗೆ ಮುಂಜಾಗ್ರತಾ, ನಿಯಂತ್ರಣ ಕ್ರಮಗಳು ಹಾಗೂ ಲಾರ್ವಾ ಸಮೀಕ್ಷೆಯ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಜಿಯೋ ಟ್ಯಾಗ್ (ಜಿಪಿಎಸ್ ಇರುವ) ಫೋಟೋಗಳನ್ನು ದಾಖಲೆಯಲ್ಲಿ ನಮೂದಿಸಬೇಕು. ಕಳೆದ ವರ್ಷದ ಸಮೀಕ್ಷೆಯ ತನಿಖೆ ನಡೆಸಿ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಎಂದು ಡಿಎಚ್‌ಒ ಆದೇಶಿಸಿದ್ದಾರೆ.
ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಲಾರ್ವಾ ಸರ್ವೆ ಹೆಸರಿಗೆ ಮಾತ್ರ ನಡೆಸಲಾಗುತ್ತಿದೆ. ಹಲವೆಡೆ ಸರ್ವೆ ಮಾಡದೇ ಜಿಪಿಎಸ್ ಇಲ್ಲದ ಹಳೆಯ ಫೋಟೋ ಅಂಟಿಸಿ ಮೋಸ ಮಾಡಲಾಗುತ್ತಿತ್ತು. ಡೆಂೆ ರೋಗ ಉಲ್ಬಣಗೊಳ್ಳಲು ಇದೂ ಒಂದು ಕಾರಣ ಎಂದು ಜು.15ರಂದು ‘ಲಾರ್ವಾ ಸರ್ವೆ ಲೆಕ್ಕಕ್ಕುಂಟು ವಾಸ್ತವದಲ್ಲಿಲ್ಲ’ ಎಂಬ ಶೀರ್ಷಿಕೆಯಡಿ ‘ವಿಜಯವಾಣಿ’ ಸಮಸ್ತ ಕರ್ನಾಟಕ ಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.
ಈ ಆದೇಶವನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ. ವರದಿ ಬಳಿಕ ಪ್ರಭಾರಿ ಡಿಎಚ್‌ಒ ಬದಲಿಗೆ ನೂತನ ಡಿಎಚ್‌ಒ ನೇಮಿಸಿ ಸರ್ಕಾರ ಆದೇಶಿಸಿದೆ.
ವಿಧಾನ ಪರಿಷತ್‌ನಲ್ಲಿ ಪ್ರಶ್ನೆ :
‘ವಿಜಯವಾಣಿ’ ವರದಿ ಗಮನಿಸಿದ ಎಂಎಲ್‌ಸಿ ಎಸ್.ವಿ.ಸಂಕನೂರ ಹಾಗೂ ಇತರ ಸದಸ್ಯರು ವಿಧಾನ ಪರಿಷತ್‌ನಲ್ಲಿ ಈ ವಿಷಯ ಚರ್ಚಿಸಲು ಪ್ರಶ್ನೆ ಕೇಳಿದ್ದು, ಸದ್ಯದಲ್ಲೇ ಚರ್ಚೆಯಾಗುವ ನಿರೀಕ್ಷೆ ಇದೆ.