ರಾಜ್ಯಮಟ್ಟದಲ್ಲಿ ಚಿತ್ರಕಲಾ ಸಮ್ಮೇಳನದ ಚಿಂತನೆ; ಕಲಾಕೃತಿ ಓದಿನ ಕಾರ್ಯಕ್ರಮದಲ್ಲಿ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ ಹೇಳಿಕೆ

30 HVR 4
Published on

ಹಾವೇರಿ: ಲಲಿತಕಲಾ ಅಕಾಡೆಮಿ ಜನಪರವಾದ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಸದ್ಯದಲ್ಲೇ ರಾಜ್ಯದ 31 ಜಿಲ್ಲೆಗಳ ಕಲಾವಿದರನ್ನು ಒಗ್ಗೂಡಿಸಿ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಸಮಾವೇಶ ನಡೆಸುವ ಯೋಜನೆ ಇದೆ ಎಂದು ಲಲಿತಕಲಾ ಅಕಾಡೆಮಿಯ ನೂತನ ಅಧ್ಯಕ್ಷ ಪ.ಸ. ಕುಮಾರ ಹೇಳಿದರು.

ನಗರದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ‘ಕಲಾಕೃತಿ ಓದು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಕಾಡೆಮಿಯಿಂದ ಕಲಾಕೃತಿ ಓದು, ಭಾವಚಿತ್ರ ತರಬೇತಿ ಕಾರ್ಯಾಗಾರ, ನಿಮ್ಮೊಂದಿಗೆ ನಾವು, ಗ್ರಾಫಿಕ್ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಶೀಘ್ರದಲ್ಲಿ ರಾಜ್ಯಮಟ್ಟದ ಚಿತ್ರಕಲಾ ಸಮ್ಮೇಳನ ಮಾಡಲಾಗುವುದು ಎಂದರು.

ಕಲಾವಿಮರ್ಶಕ ಕೆ.ವಿ. ಸುಬ್ರಮಣ್ಯ ಮಾತನಾಡಿ, ಈ ಚಿತ್ರದಲ್ಲಿ ಏನೋ ಅಡಗಿದೆ ಎಂಬ ಕುತೂಹಲ ಹುಟ್ಟಬೇಕು. ಕಲಾವಿದನ ನಂಬಿಕೆ, ಬದ್ಧತೆ, ಕುಶಲತೆಗಳು ಅದರಲ್ಲಿ ಬಿಂಬಿತವಾಗಿರಬೇಕು. ಒಂದು ನಿಗೂಢ ಕಲಾಕೃತಿ ಐತಿಹಾಸಿಕ ಪ್ರಜ್ಞೆಯ ಜತೆಗೆ ಒಂದು ತಾತ್ವಿಕ ಬದ್ಧತೆಯನ್ನು ಹೊಂದಿದಾಗ ಅದಕ್ಕೊಂದು ಸಾತ್ವಿಕತೆ ಬರಲು ಸಾಧ್ಯವೆಂದು ಹೇಳಿದರು.

ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿತ್ರವೊಂದು ಕಣ್ಣಿಗೆ ತಾಕಬೇಕು. ಇಲ್ಲವೇ ತಡೆದು ನಿಲ್ಲಿಸಬೇಕು. ಸಾಹಿತ್ಯ ವಿಮರ್ಶೆಗೆ ವ್ಯಾಕರಣ ಶಬ್ದ ಸಂಪತ್ತು ಬುನಾದಿಯಾದರೆ, ಚಿತ್ರಕಲೆಗೆ ಬಣ್ಣ ರೇಖೆಗಳೇ ವ್ಯಾಕರಣವಾಗುತ್ತವೆ ಎಂದರು.

ಅಕಾಡೆಮಿಯ ಸದಸ್ಯ ಕರಿಯಪ್ಪ ಹಂಚಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಸಿಯ ತಾರಾ ಬಳಗದ ಕಲಾ ದಂಪತಿ ಗ.ಮ.ತುಂಬೆಮನೆ, ಜಯಾ ತುಂಬೆಮನೆ ಹಾಗೂ ಪವಿತ್ರಾ ಹೆಮಟೆಮನೆ ಅವರನ್ನು ಸನ್ಮಾನಿಸಲಾಯಿತು.

ಸಾಹಿತಿ ಡಾ.ಧರಣೇಂದ್ರ ಕುರಕುರಿ, ಕಲಾವಿದರಾದ ಬಹುರೂಪಿ, ಕುಮಾರ ಕಾಟೇನಹಳ್ಳಿ, ಸಿ.ಡಿ.ಜಟ್ಟೆಣ್ಣನವರ, ಎಸ್.ಜೆ. ಚಿತ್ರಗಾರ., ಬಸವರಾಜ ಕಲ್ಲೂರ, ಶಿವರಾಜ, ಎಂ.ಡಿ. ಹೊನ್ನಮ್ಮನವರ, ನಿರ್ಮಲಾ ಹಿಮ್ಮಡಿ, ವಿದ್ಯಾರ್ಥಿ ಕಲಾವಿದರು, ಉಪನ್ಯಾಸಕರು, ಇತರರು ಭಾಗವಹಿಸಿದ್ದರು.

ವೆಂಕಟೇಶ ಬಡಿಗೇರ ನಿರೂಪಿಸಿದರು. ಶಾಂತಾ ಕೊಲ್ಲೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net