

ಹಾವೇರಿ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ ಜ.30ರಿಂದ ಫೆ.13ರವರೆಗೆ ಹಮ್ಮಿಕೊಂಡಿರುವ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕುರಿತು ಪೂರ್ವಭಾವಿ ಸಭೆ ನಡೆಸಿದ ಅವರು, ಕುಷ್ಠರೋಗ ಪ್ರಕರಣಗಳನ್ನು ಬೇಗೆ ಪತ್ತೆಹಚ್ಚಬೇಕು ಹಾಗೂ ಸಾಮಾಜಿಕ ಕಳಂಕ ಮತ್ತು ತಾರತಮ್ಯಗಳನ್ನು ಹೊಗಲಾಡಿಸಲು ಹೆಚ್ಚಿನ ಗಮನಹರಿಸಬೇಕು ಎಂದರು.
ಕುಷ್ಠರೋಗದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಹಾಗೂ ಕುಷ್ಠರೋಗಿಗಳು ಹೆಚ್ಚು ಪತ್ತೆಯಾಗಿರುವ ಪ್ರದೇಶಗಳಲ್ಲಿ ವಿಶೇಷ ಅಧ್ಯಯನ ಕೈಗೊಂಡು, ಕುಷ್ಠರೋಗ ತಡೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಚನಬಸಯ್ಯ ವಿರಕ್ತಮಠ ಮಾತನಾಡಿ, ಕುಷ್ಠರೋಗದಿಂದ ಅಂಗವೈಕಲ್ಯ ಉಂಟಾಗುತ್ತದೆ. ಆದರೆ ಸಾರ್ವಜನಿಕ ವಲಯದಲ್ಲಿ ಇದು ಶಾಪ ಎಂಬ ಮೂಡನಂಬಿಕೆ ಇದೆ. ಕುಷ್ಠರೋಗ ಬೇಗ ಪತ್ತೆಯಾಗುವುದಿಲ್ಲ, ತಡವಾಗಿ ಪತ್ತೆಯಾಗುತ್ತದೆ. ಹಾಗಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಹಾಗೂ ಕುಷ್ಠರೋಗಿಗಳ ಪತ್ತಗೆ ಈ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಪಾಕ್ಷಿಕ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ 272 ತಂಡಗಳನ್ನು ರಚಿಸಲಾಗಿದೆ ಎಂದರು.
ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಗದೀಶ ಪಾಟೀಲ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ವಿವಿಧ ತಾಲೂಕುಗಳ ತಾಲೂಕಾ ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
76 ಕೇಸ್ ವರದಿ
ಜಿಲ್ಲೆಯಲ್ಲಿ 76 ಕುಷ್ಠರೋಗಿಗಳು ಪತ್ತೆಯಾಗಿದ್ದು, ಜಿಲ್ಲೆಯ ಸವಣೂರ ಭಾಗದಲ್ಲಿ ಹೆಚ್ಚಾಗಿ ಪತ್ತೆಯಾಗಿವೆ. ಹಾವನೂರ ಹಾಗೂ ಗುತ್ತಲ ಭಾಗದಲ್ಲಿ ಪತ್ತೆಯಾಗಿವೆ. ಈ ಕುರಿತು ಕೇಂದ್ರ ತಂಡ ಅಧ್ಯಯನಕ್ಕೆ ಸೂಚನೆ ನೀಡಿದ್ದು, ವೈದ್ಯಕೀಯ ಕಾಲೇಜು, ಕೇಂದ್ರ ತಂಡದೊಂದಿಗೆ ಅಧ್ಯಯನ ಕೈಗೊಳ್ಳಲಾಗುವುದು ಎಂದು ಡಾ.ವಿರಕ್ತಮಠ ಸಭೆಗೆ ಮಾಹಿತಿ ನೀಡಿದರು.