

ಹಾವೇರಿ: ತಾಲೂಕಿನ ಕುರುಬಗೊಂಡ ಗ್ರಾಮದ ಮೃತ್ಯುಂಜಯ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಶಾಲಾ ಸಂಸ್ಥಾಪಕರ 34ನೇ ಪುಣ್ಯಸ್ಮರಣೆ ಹಾಗೂ ದಿ.ಡಾ.ಸೋಮಣ್ಣ ಬಶೆಟ್ಟಿಯವರ ಸ್ಮರಣೆ ಅಂಗವಾಗಿ ವನಮಹೋತ್ಸವ ಆಚರಿಸಲಾಯಿತು.
ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಮಾತನಾಡಿ, ಪ್ರತಿ ಶಾಲೆಗಳಲ್ಲಿ ಶಿಕ್ಷಕರು ತಮ್ಮ ಪಾಠಗಳ ಜತೆಗೆ ನೈತಿಕ ಮೌಲ್ಯಗಳನ್ನು ಮಕ್ಕಳಲ್ಲಿ ತುಂಬುವ ಅಗತ್ಯತೆ ಇದೆ. ಮಗುವಿನ ಪ್ರಗತಿಯಲ್ಲಿ ಪಾಲಕರ ಪಾತ್ರ ಮಹತ್ತರವಾಗಿದ್ದು ಮೊಬೈಲ್ ಮತ್ತು ಟಿವಿಯಿಂದ ಮಕ್ಕಳನ್ನು ಆದಷ್ಟು ದೂರವಿಡುವುದು ಉತ್ತಮ ಎಂದರು.
ಸಾನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕುರುಬಗೊಂಡ ಗ್ರಾಮಕ್ಕೆ ಶಿವಬಸಪ್ಪ ಶೆಟ್ರ ಕೊಡುಗೆ ಅಪಾರ ಎಂದರು.
ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮಾತಮಾಡಿ, ಹಿಂದಿನಿಂದ ಸರ್ಕಾರ ಮಾಡದೇ ಇರುವ ಶೈಕ್ಷಣಿಕ ಕ್ರಾಂತಿಯನ್ನು ಮಠ ಮಾನ್ಯಗಳು ಮತ್ತು ವಿದ್ಯಾಸಂಸ್ಥೆಗಳು ಮಾಡುತ್ತ ಬಂದಿವೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ನಯನಾ ಮರೆಕ್ಕನವರ, ರೋಹಿಣಿ ಕುಂಬಾರಗೇರಿ, ರೇಖಾ ಚಾವಡಿ ಅವರಿಗೆ ನಗದು ಬಹುಮಾನ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಾಜಿ ಸೈನಿಕರಾದ ಬಸವರಾಜ ಕಡ್ಲಿ, ಹಾಗೂ ಸಿಆರ್‌ಪಿಎಫ್ ಯೋಧ ಶಬ್ಬೀರಸಾಬ ಮಾಚೇನಹಳ್ಳಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿದರು.
ಶಾಲಾ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡಲಾಯಿತು. ನಿವೃತ್ತ ಶಿಕ್ಷಕ ಪಿ.ಬಿ.ಮುದ್ದಿ ಸಂಸ್ಥಾಪಕ ಶಿವಬಸಪ್ಪ ಶೆಟ್ರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.
ಅಡಿವೆಪ್ಪಶೆಟ್ರು ಬಶೆಟ್ಟಿಯವರ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯರಾದ ಜೆ.ಬಿ.ಅಂಗಡಿ, ಸಿ.ಎನ್.ಮರೆಕ್ಕನವರ, ಬಿ.ಸಿ.ಹುಡೇದ, ಎಸ್.ಬಿ.ವರ್ದಿ, ಎಸ್.ಡಿ.ಬಶೆಟ್ಟಿಯವರ, ಎಸ್.ಬಿ.ಬಶೆಟ್ಟಿಯವರ, ಎಸ್.ಎಸ್.ಹಾವೇರಿ, ಬಿ.ಎಸ್.ಕುಕ್ಕನಗೌಡ್ರ, ರುದ್ರಣ್ಣ ಬಶೆಟ್ಟಿಯವರ, ಸುನಿಲ ಜರಾಳೆ, ವಿಜಯ ಬಶೆಟ್ಟಿಯವರ, ಮೂಕಪ್ಪ ನರೇಗಲ್ಲ, ಇತರರು ಭಾಗವಹಿಸಿದ್ದರು.
ಶಿಕ್ಷಕಿ ಎಸ್.ಡಿ.ಶೋಭಾರಾಣಿ ಸ್ವಾಗತಿಸಿದರು. ಮುಖ್ಯಶಿಕ್ಷಕ ಬಸವರಾಜ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ.ತಾಂದಳೆ ಪ್ರತಿಭಾ ಪುರಸ್ಕಾರ ನೇರವೇರಿಸಿದರು. ಎಚ್.ಎಫ್.ಹಲವಾಗಲ ನಿರೂಪಿಸಿದರು, ಎಸ್.ಎಸ್.ಪಾಟೀಲ ವಂದಿಸಿದರು.