ಕೆಂಪುಕೋಟೆ ಧ್ವಜಾರೋಹಣಕ್ಕೆ ಕೂರಗುಂದ ವಿದ್ಯಾರ್ಥಿನಿ ಆಯ್ಕೆ; ಹಾವೇರಿಯಿಂದ ದೆಹಲಿಯತ್ತ ಹೊರಟ ಪಿಎಂಶ್ರೀ ಶಾಲೆಯ ಹಿರಿಯಮ್ಮ ಅಗಸರ

10 HVR 7 A
Published on

ಹಾವೇರಿ: ದೆಹಲಿಯ ಕೆಂಪುಕೋಟೆಯ ಮೇಲೆ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಪಿಎಂಶ್ರೀ ಶಾಲೆಗಳಿಂದ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇದರಲ್ಲಿ ಹಾವೇರಿ ತಾಲೂಕಿನ ವಿದ್ಯಾರ್ಥಿನಿಯೊಬ್ಬರು ಆಯ್ಕೆಯಾಗಿದ್ದಾರೆ.
ಬೆಂಗಳೂರು, ಮಂಗಳೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗದಿಂದ ಒಬ್ಬೊಬ್ಬ ವಿದ್ಯಾರ್ಥಿಯನ್ನು ಆಯ್ಕೆ ಮಾಡಲಾಗಿದೆ. ಬೆಳಗಾವಿ ವಿಭಾಗದಿಂದ ಹಾವೇರಿ ತಾಲೂಕು ಕೂರಗುಂದ ಗ್ರಾಮದ ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)ಯ 10ನೇ ತರಗತಿ ವಿದ್ಯಾರ್ಥಿನಿ ಹಿರಿಯಮ್ಮ ನರಸಪ್ಪ ಅಗಸರ ಆಯ್ಕೆಯಾಗಿದ್ದಾರೆ.
ಹಾವೇರಿ ಡಿಡಿಪಿಐ ಕಚೇರಿಯಿಂದ ಆಯ್ಕೆ ಮಾಡಲು ಸೂಚನೆ ಬಂದಿತ್ತು. ಡಿಡಿಪಿಐ ಸುರೇಶ ಹುಗ್ಗಿ ಸೂಚನೆ ಮೇರೆಗೆ ಕೂರಗುಂದ ಪಿಎಂಶ್ರೀ ಶಾಲೆಯ ಮುಖ್ಯೋಪಾಧ್ಯಾಯೆ ಶಿವಲೀಲಾ ಎಸ್. ವಾಣಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಹಿರಿಯಮ್ಮರನ್ನು ಆಯ್ಕೆ ಮಾಡಿದ್ದಾರೆ. ಆ.13ರಂದು ಹಿರಿಯಮ್ಮ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ವಿಮಾನಯಾನದ ಮೂಲಕ ದೆಹಲಿಗೆ ತೆರಳಿದ್ದಾರೆ. ಹಾವೇರಿಯಿಂದ ಡಿವೈಪಿಸಿ ಲತಾಮಣಿ ಟಿ.ಎಂ. ಅವರೂ ದೆಹಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಆತ್ಮೀಯ ಬೀಳ್ಕೊಡುಗೆ :
ಶಾಲೆಯಲ್ಲಿ ಶನಿವಾರ ಮುಖ್ಯೋಪಾಧ್ಯಾಯೆ ಶಿವಲೀಲಾ ಎಸ್. ವಾಣಿ ಬಾಲಕಿ ಹಿರಿಯಮ್ಮರನ್ನು ಸನ್ಮಾನಿಸಿ, ಬೀಳ್ಕೊಟ್ಟರು. ನಂತರ ಮಾತನಾಡಿದ ಎಚ್‌ಎಂ ಶಿವಲೀಲಾ, ರಾಷ್ಟ್ರಮಟ್ಟದ ಕಾರ್ಯಕ್ರಮಕ್ಕೆ ಹಿಂದುಳಿದ ಗ್ರಾಮದ ವಿದ್ಯಾರ್ಥಿನಿ ಆಯ್ಕೆಯಾಗಿದ್ದು ಶಾಲೆ, ಗ್ರಾಮ ಸೇರಿದಂತೆ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು, ಸಿಬ್ಬಂದಿ, ಗ್ರಾಮಸ್ಥರು, ಇತರರಿದ್ದರು.
ಶಿಕ್ಷಕರು, ಗ್ರಾಮಸ್ಥರಲ್ಲಿ ಸಂಭ್ರಮ
2023-24ನೇ ಸಾಲಿಗೆ ಹಾವೇರಿ ಸೇರಿ ಎಂಟು ಜಿಲ್ಲೆಗಳಿಂದ ಪಿಎಂಶ್ರೀ ಶಾಲೆಯಿಂದ ಆಯ್ಕೆಯಾದ ಏಕೈಕ ಶಾಲೆ ಕೂರಗುಂದ ಶಾಲೆ. ಈ ಶಾಲೆಯಿಂದ ಪ್ರಥಮ ಬಾರಿಗೆ ಆಗಸ್ಟ್ 15 ಧ್ವಜಾರೋಹಣ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ರಾಜ್ಯ ಕಚೇರಿಯಿಂದ ವಿಮಾನಯಾನದ ಮೂಲಕ ವಿದ್ಯಾರ್ಥಿನಿಯನ್ನು ಕಳುಹಿಸಲಾಗುತ್ತಿದೆ. ಪ್ರಧಾನಿಯವರ ಜತೆಗೆ ನಮ್ಮ ಗ್ರಾಮದ ಶಾಲೆಯ ವಿದ್ಯಾರ್ಥಿನಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶಾಲೆಯ ಶಿಕ್ಷಕರು, ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net