

ಹಾವೇರಿ: ರೈತರು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಅಸಂಘಟಿತ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅ.14ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವ್ಯವಸಾಯ ಕೂಲಿ ವೃತ್ತಿಪರ ಯೂನಿಯನ್ ಅಧ್ಯಕ್ಷ ಶೇಖಪ್ಪ ಶಿವಕ್ಕನವರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಪರವಾಗಿ ಪ್ರತಿಭಟನೆ ಹಮ್ಮಿಕೊಂಡು, ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ನರೇಗಾ ಕೆಲಸಕ್ಕಾಗಿ 423 ರೂ. ಕೂಲಿ ಹಣವನ್ನು ಕಾನೂನು ಬದ್ಧವಾಗಿ ನೀಡಬೇಕು. 100 ಮಾನವ ದಿನಗಳ ಬದಲು 200 ದಿನಗಳನ್ನು ನಿಗದಿಪಡಿಸಬೇಕು. ಪ್ರತಿ ಕುಟುಂಬಕ್ಕೆ ಜಾಬ್ ಕಾರ್ಡ್ ಬದಲು, ಪ್ರತಿ ವ್ಯಕ್ತಿಗೆ ಜಾಬ್ ಕಾರ್ಡ್ ನೀಡಬೇಕು. ಎಸ್.ಸಿ., ಎಸ್.ಟಿ ಅವರಿಗೆ ಸೂಕ್ತ ಭೂಮಿ ಹಾಗೂ ಮನೆ ನೀಡಬೇಕು. ತಾಲ್ಲೂಕಿನ ಹಲವರಿಗೆ ಇದುವರೆಗೂ ಪಟ್ಟಾ ನೀಡಿಲ್ಲ. ಅರ್ಹರಿಗೆ ಕೂಡಲೇ ಪಟ್ಟಾ ನೀಡಬೇಕು ಎಂದು ಆಗ್ರಹಿಸಿದರು.
ರೈತರಿಗೆ ಆರು ತಿಂಗಳಿನಿಂದ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಇಹಣ ಸೇರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ನರೇಗಾ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಕಾಮಾಕ್ಷಿ ರೇವಣಕರ ಮಾತನಾಡಿ, ಅಸಂಘಟಿತ ಕಾರ್ಮಿಕರನ್ನು ಕೆಲಸಗಾರರೆಂದು ಗುರುತಿಸಿ ನೋಂದಣಿ ಮಾಡಿಕೊಳ್ಳಬೇಕು. ಅಸಂಘಟಿತ ಕಾರ್ಮಿಕರು ಹಾಗೂ ಅವರ ಅವಲಂಬಿತ ಮಹಿಳೆಯರಿಗೆ 50,000 ರೂ. ಹೆರಿಗೆ ಭತ್ಯೆ ನೀಡಬೇಕು. ರಾಜ್ಯ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು. ತಿಂಗಳಿಗೆ 5 ಸಾವಿರ ರೂ. ಪಿಂಚಣಿ ನೀಡಬೇಕು. ಅಂಗವಿಕಲತೆ ಹಾಗೂ ಸಾವಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಗರಾಜ ಮಾಳೂರ, ಬಸವಣ್ಣೆಪ್ಪ ಚಲವಾದಿ, ನವೀನ ಹುಲ್ಲತ್ತಿ ಇದ್ದರು.
6 ತಿಂಗಳಿಂದ ವೇತನವಿಲ್ಲ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ವಾಹಿನಿ ಹಾಗೂ ಕಸ ವಿಲೇವಾರಿ ತರಬೇತಿ ಪಡೆದ ಎಲ್ಲ ಅಭ್ಯರ್ಥಿಗಳನ್ನು ಕೆಲಸಕ್ಕೆ ಹಾಜರುಪಡಿಸಿಕೊಳ್ಳಬೇಕು. ಅವರಿಗೆ ತಿಂಗಳಪೂರ್ತಿ ಕೆಲಸ ನೀಡಬೇಕು. ಸ್ವಚ್ಛ ವಾಹಿನಿ ಸಿಬ್ಬಂದಿ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಗೌರವ ಧನ ನೀಡಬೇಕು. ಸ್ವಚ್ಛ ವಾಹಿನಿ ಸಿಬ್ಬಂದಿಗೆ 6 ತಿಂಗಳಿನಿಂದ ವೇತನ ನೀಡಿಲ್ಲ. ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಶೇಖಪ್ಪ ಆಗ್ರಹಿಸಿದರು.