

ಹಾವೇರಿ: ತಾಲೂಕಿನ ಸುಕ್ಷೇತ್ರ ಕುಳೇನೂರ ಗ್ರಾಮದ ಸಂಕಲ್ಪ ಸಿದ್ಧಿ ಶ್ರೀ ಬೈಲಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ವಿಶೇಷ ಅಭಿಷೇಕ ಸೇವೆ ವ್ಯವಸ್ಥೆ ಇರಲಿದೆ. ಶ್ರಾವಣ ಮಾಸದ ಕೊನೆಯ ದಿನ ಅಮಾವಾಸ್ಯೆಯಂದು ಐವರು ಸ್ವಾಮೀಜಿಗಳ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ, ಪ್ರಸಾದ ಸೇವೆ ಜರುಗಲಿದೆ. ಆಸಕ್ತ ಭಕ್ತರು ಕುಳೇನೂರ ಗ್ರಾಮದ ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಶ್ರೀ ಬೈಲ ಬಸವೇಶ್ವರ ಅಭಿಷೇಕ ಸಮಿತಿ ಅಧ್ಯಕ್ಷ ಶಿವಬಸಪ್ಪ ಮಲಗುಂದ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ವರ ಕೊಡುವ ಬಸವಣ್ಣ
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕುಳೇನೂರ ಬೈಲ ಬಸವೇಶ್ವರ ವರವ ಕೊಡುವ ಬಸವಣ್ಣ ಎಂದೇ ಪ್ರಸಿದ್ಧಿ ಪಡೆದಿದೆ. ಬೆಳ್ಳಿ ಕವಚ ಧರಿಸಿರುವ ಏಳು ಬಸವಣ್ಣನ ಮೂರ್ತಿಗಳನ್ನು ಒಂದೇ ಕಡೆ ಪ್ರತಿಷ್ಠಾಪಿಸಿರುವುದು ದೇವಸ್ಥಾನದ ವಿಶೇಷವಾಗಿದೆ. ಹಾಗಾಗಿ, ಇಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಚುನಾವಣೆಗಳ ಸಂದರ್ಭದಲ್ಲಿ ಇಲ್ಲಿನ ಹಲವು ಶಾಸಕ, ಸಚಿವರು ಸೇರಿದಂತೆ ಇತರ ಜನಪ್ರತಿನಿಧಿಗಳು ಬೈಲಬಸವಣ್ಣನಿಗೇ ಮೊದಲ ಪೂಜೆ ನೆರವೇರಿಸುವ ಸಂಪ್ರದಾಯವಿದೆ. ಶ್ರಾವಣ ಮಾಸದಲ್ಲಿ ಹರಕೆ ಹೊತ್ತವರು, ಹರಕೆ ಹೊರುವವರು ಅಭಿಷೇಕ ಸೇವೆ ಮಾಡಿಸುವುದು ಮತ್ತೊಂದು ವಿಶೇಷ.